ಕಲಶ ಸ್ಥಾಪನೆ-ಪೂರ್ವಾಚಾರ್ಯರ ಪೂಜೆ-ವೀರ ಶಾಶನ ಜಯಂತಿ ಆಚರಣೆ
ಮುಂಬಯಿ (ಆರ್‍ಬಿಐ), ಜು.06: ಮೂಡುಬಿದಿರೆಯಲ್ಲಿ ಶ್ರೀ ಜೈನಮಠದಲ್ಲಿ ಡಾ| ಸ್ವಸ್ತಿಶ್ರೀಚಾರುಕೀರ್ತಿ ಸ್ವಾಮೀಜಿ ಇವರ ಚಾತುರ್ಮಾಸ ಕಲಶ ಸ್ಥಾಪನೆ ಹಾಗೂ ವೀರ ಶಾಶನ ಜಯಂತಿ ಆಚರಣೆ ಇಂದಿಲ್ಲಿ ಮಂಗಳವಾರ ಮೂಡುಬಿದಿರೆ ಇಲ್ಲಿನ ಶ್ರೀಮಠದಲ್ಲಿ ಆಚರಿಸಲಾಯಿತು.
ಕಳೆದ ಭಾನುವಾರ ಗುರು ಪೂರ್ಣಿಮಾ ಪರ್ವ ಪೂರ್ವಾಚಾರ್ಯರ ಪೂಜೆ ಸಲ್ಲಿಸಿ ಶ್ರೀ ಜೈನ ಮಠದಲ್ಲಿ ಆಚರಿಸಲಾಗಿತ್ತು. ಗ್ರಹಣ ನಿಮಿತ್ತ ಚಾತುರ್ಮಾಸ ಕಲಶ ಸ್ಥಾಪಿಸದೆ ಇಂದು ಸೋಮವಾರ ಪ್ರಾತಃ ಕಾಲ ಅಭಿಷೇಕ, ಭಕ್ತಿ ಮೊದಲಾದ ಧಾರ್ಮಿಕ ಕ್ರಿಯೆ ನಡೆಸಿದ ಶ್ರೀ ಗಳವರು ಅಪರಾಹ್ನ ಕಲಶ ಸ್ಥಾಪಿಸಲಾಯಿತು. ಪಟ್ಟದ ಪುರೋಹಿತ ಪಾರ್ಶ್ವನಾಥ್ ಇಂದ್ರ ಶ್ರೀಗಳವರ ಮಾರ್ಗದರ್ಶನದಲ್ಲಿ ಪೂಜೆ ನೆರವೇರಿಸಿದರು. ಇದೇ ಪರ್ವಕಾಲದಲ್ಲಿ ಶ್ರೀ ಮಠದಲ್ಲಿ ಸ್ವಸ್ತಿಶ್ರೀಚಾರುಕೀರ್ತಿಯರು ಚಾತುರ್ಮಾಸ ವ್ರತ ಕೈಗೊಂಡರು. ಈ ಸಂದರ್ಭದಲ್ಲಿ ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್, ಸುಧಾಕರ್ ಉಪಸ್ಥಿತರಿದ್ದರು.
ಪಟ್ಟಾಭಿಷೇಕ ಅದ ನಂತರ ಇದೇ ಪ್ರಥಮ ಬಾರಿ ದೇಶದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದು ಈ ಬಾರಿ ಸ್ವಸ್ತಿಶ್ರೀಯರು ವಿದೇಶ ಪ್ರಯಾಣ ಕೈಗೊಳ್ಳುವುದಿಲ್ಲ ಎಂದು ಶ್ರೀ ಜೈನಮಠ ಮೂಡುಬಿದಿರೆ ಇದರ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭ ಡಾ| ಸ್ವಸ್ತಿಶ್ರೀಚಾರುಕೀರ್ತಿ ಸ್ವಾಮೀಜಿಗಳು ಉಪದೇಶ ನೀಡಿ ಮಹಾವೀರರು ಸರಳವಾದ, ಸುಲಭವಾದ ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಅರ್ದ ಮಾಗಧಿ ಎನ್ನುವ ಪ್ರಾಕೃತ ಭಾಷೆಯಲ್ಲಿ ಕೇವಲಜ್ಞಾನವಾದ ನಂತರ ತಮ್ಮ 30ನೇ ವಯಸ್ಸಿನಿಂದ 32 ವರ್ಷಗಳ ಕಾಲ ಧರ್ಮೋಪದೇಶವನ್ನು ನಿರಂತರ ನೀಡಿದರು. ಅವರ ಒಟ್ಟು ಜೀವಿತಾವಧಿ 72 ವರ್ಷಗಳು ಅವರ ತತ್ತ್ವಗಳು, ಬೋಧನೆಗಳು ಸಾರ್ವಕಾಲಿಕ ಸತ್ಯ ಹಿತಕಾರಿಗಳಾಗಿತ್ತು. ಅವರ ಧರ್ಮ ಬೋದನೆಗಳನ್ನು ಅವರ ಗಣಧರರಾದ ವೈದಿಕ ಶ್ರೇಷ್ಠ ಗೌತಮರು ಸರ್ವರಿಗೂ ತಿಳಿಸುತ್ತಿದ್ದರು. ಕ್ಷತ್ರಿಯ ರಾಜರು ಮೌರ್ಯರು, ಜ್ಞಾತೃ ವಂಶದವರು, ಶ್ರೇಣಿಕ, ಬಿಂಬಸಾರ, ಸಿಂಧು ದೇಶದ ಉದಯನ್, ಪರ್ಷಿಯಾದ ದಾರಾ ಶಾಹ ಆಕರ್ಷಿತರಾಗಿದ್ದರು. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ ಎಂಬ ಪಂಚ ಶೀಲಗಳನ್ನು ಬೋಧಿಸಿದರು. ಇವು ಮಾನವೀಯ ಗುಣಮೌಲ್ಯಗಳೆಂದು ತಿಳಿಸಿ ಸ್ವಕಲ್ಯಾಣ ಪರಕಲ್ಯಾಣದ ಆತ್ಮಸಾಧನೆಯು ಸರ್ವರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ನುಡಿದರು. ಪ್ರಾಣಿದಯೆ, ಕರುಣೆ, ಸಹಬಾಳ್ವೆ, ಕ್ಷಮೆ, ಮೃದು ಸ್ವಭಾವ, ಸರಳ ಸಾತ್ವಿಕ ಜೀವನ, ಶ್ರದ್ಧಾವಂತ, ವಿವೇಕವಂತ ಸಾಧಕರ ಲಕ್ಷಣ ಎಂದರು. ಧರ್ಮದಲ್ಲಿ ಒಳಸುಳಿದಿದ್ದ ಶಿಥಿಲಾಚಾರವನ್ನು ಹೋಗಲಾಡಿಸಿದರು. ಭಕ್ತ ಹಾಗೂ ಭಗವಂತನ ನಡುವೆ ಕಂದರ ಸಲ್ಲದು ಎಂದರು. ಜೀವಹಿಂಸೆಯಿಂದ, ರಕ್ತಪಾತದಿಂದ, ಪ್ರಾಣಿಗಳನ್ನು ನೋಯಿಸುವುದರಿಂದ, ಅತಿ ಭಾರಾರೋಪಣೆ ಮಾಡುವುದರಿಂದ, ಮೂಕಪ್ರಾಣಿಗಳ ವೇದನೆಯು ಭವ ಭವದಲ್ಲಿ ನಮ್ಮ ದುಃಖವನ್ನು ಹೆಚ್ಚಿಸುತ್ತದೆ. ಜೀವದಯಾಪರವಾದ ಅಹಿಂಸೆಯೇ ಪರಮಧರ್ಮವೆಂದು ಬೋಧಿಸಿದರು. ನೀವೂ ಬದುಕಿ, ಇತರರನ್ನೂ ಬದುಕಗೊಡಿ ಎಂದು ಹರಸಿದರು.