ಮುಂಬಯಿ, ಜು.23: ಭಾರತ ಸರಕಾರದ ಮಹಿಳಾ ರಾಷ್ಟ್ರೀಯ ಆಯೋಗದ ಶ್ಯಾಮಲ ಎಸ್.ಕುಂದರ್ ಇಂದಿಲ್ಲಿ ಗುರುವಾರ ಪೂರ್ವಾಹ್ನ ತನ್ನ ತವರೂರು ಉಡುಪಿ ಜಿಲ್ಲೆಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ, ಉತ್ತರ ಮುಂಬಯಿಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಗೋಪಾಲ್ ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ಅವರು ಮಣಿಪಾಲ ಸನಿಹದ ಹಿರಿಯಡ್ಕ ಇಲ್ಲಿನ ಶ್ಯಾಮಲ ಕುಂದರ್ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು.
ರಾಷ್ಟ್ರದ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹಿಳೆಯರ ಮಾನ್ಯತೆ ಮತ್ತು ಉನ್ನತೀಕರಣದ ಬಹುಮಾನ್ಯ ಯೋಜನೆಗಳ ಬಗೆಗಿನ ಅನೇಕ ವಿಷಯಗಳೊಂದಿಗೆ ಕುಶಲೋಪರಿ ನಡೆಸಿದ ಶ್ಯಾಮಲ ಆಯೋಗದ ನವ ದೆಹಲಿಯಲ್ಲಿನ ಜಸೊಲಾ ಇನ್‍ಸ್ಟಿಟ್ಯೂಶನಲ್ ಏರಿಯಾದಲ್ಲಿನ ಕಚೇರಿಗೆ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಮುಂಬಯಿಯ ಸಮಾಜ ಸೇವಕರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ಬಿಜೆಪಿ ನೇತಾರ, ಮಂಡಲ ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ತಾಲೂಕು ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಭರವಸೆಯಿತ್ತ ಎರ್ಮಾಳ್ ಹರೀಶ್
ಎರ್ಮಾಳ್ ಹರೀಶ್ ಶೆಟ್ಟಿ ಕಾರ್ನಾಡ್ ಇಲ್ಲಿನ ಮೂಲ್ಕಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ನಗರ ಮತ್ತು ಗ್ರಾಮೀಣಾಭಿವೃದ್ಧಿ ಜನತೆಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಈ ಆಸ್ಪತ್ರೆಯಲ್ಲಿನ ಆಂಬ್ಯುಲೆನ್ಸ್ ಸುಮಾರು ಇಪ್ಪತ್ತು ವರ್ಷಗಳ ಹಳೆಯದ್ದಾಗಿದ್ದು ಇದು ಸದ್ಯ ಸೇವೆಗೆ ಉಪಯುಕ್ತವಲ್ಲ ಅನ್ನುವುದನ್ನು ಮನವರಿಸಿಕೊಂಡ ಎರ್ಮಾಳ್ ಹರೀಶ್ ಅವರು ಮೂಲ್ಕಿ ಸರಕಾರಿ ಆಸ್ಪತ್ರೆಯ ವೈದ್ಯಕೀಯ ನಿರ್ವಾಹಕ ಡಾ| ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ ಅತ್ಯಾಧುನಿಕ ವ್ಯವಸ್ಥೆವುಳ್ಳ ನೂತನ ಆಂಬ್ಯುಲೆನ್ಸ್ ನೀಡುವುದಾಗಿ ಭರವಸೆಯನ್ನಿತ್ತರು. ಸರಕಾರದ ನಿಯಮಾನುಸಾರದಂತೆ ತಾಲೂಕು ತಹಶೀಲ್ದಾರ್ ಮತ್ತು ಪ್ರಾದೇಶಿಕ ಆರೋಗ್ಯಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಸರಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ಕೆ.ಲಕ್ಷ್ಮೀ, ಯೂಥ್ ಸ್ಟಾರ್ ಆದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.