Saturday 10th, May 2025
canara news

ಪರಿಸರ ಮಾಲಿನ್ಯ ತಡೆಯಲು ಸಕಾಲ

Published On : 08 Aug 2020


ಕೊರೊನಾದ ಹೊಡೆತದಿಂದಾಗಿ ಪರಿಸರ ಮಾಲಿನ್ಯ ಬಹಳಷ್ಟು ತಗ್ಗಿದೆ. ಇಂತಹ ಸಂದರ್ಭದಲ್ಲಿ ಕಶ್ಮಲ, ಕೊಳಕುಗಳಿಂದ ತುಂಬಿರುತ್ತಿದ್ದ ಸಾಕಷ್ಟು ಪ್ರದೇಶಗಳು ಶುಚಿಗೊಂಡು ಮಲಿನತೆಯನ್ನು ನಿವಾರಿಸಿಕೊಂಡಿವೆ. ಜನರಲ್ಲಿ ಹಣದ ಹರಿವಿನ ಕೊರತೆಯ ಕಾರಣದಿಂದಾಗಿ ಅನಗತ್ಯ ತಿರುಗಾಟ, ಕೊಂಡುಕೊಳ್ಳುವಿಕೆಗಳೆಲ್ಲವೂ ನಿಂತಿರುವ ಕಾರಣ ಸಾರ್ವಜನಿಕ ವಾಹನಗಳು ಬಹಳ ಕಡಿಮೆ ಚಲಿಸುತ್ತಿವೆ. ಕಾರ್ಖಾನೆಗಳೂ ಕೂಡಾ ನೌಕರರ ಊರು-ಮನೆಗೆ ಹಿಂತಿರುಗಿರುವ ಕಾರಣ ಪ್ರಾರಂಭಗೊಳ್ಳದೆ/ ಪ್ರಾರಂಭಗೊಂಡರೂ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಶಿಫ್ಟ್ ಕಾರ್ಯದಿಂದ ನಿಧಾನವಾಗಿ ಪ್ರಾರಂಭಗೊಳ್ಳುವ ಹಂತದಲ್ಲಿವೆ. ಒಟ್ಟಾರೆ ಎಲ್ಲ ದೃಷ್ಟಿಯಿಂದ ಪರಿಸರ ಮಾಲಿನ್ಯ ಬಹಳಷ್ಟು ತಗ್ಗಿರುವುದು ಸಾರ್ವಜನಿಕವಾಗಿ ಎಲ್ಲರಿಗೂ ಗೋಚರಿಸುತ್ತಿದೆ.

ಇಂತಹ ಅನುಕೂಲಕರ ಸನ್ನಿವೇಶದಲ್ಲಿ ಜನರಲ್ಲಿ ಹಣದ ಒದಗಣೆ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದರೂ ಕೂಡಾ ಸಾರ್ವಜನಿಕ ವಾಹನಗಳು ಒಂದು ವೇಳೆ ಬಹಳ ಹಿಂದಿನವಾಗಿದ್ದರೆ ಪರಿಸರ ಮಲಿನತೆ ಕಡಿಮೆ ಮಾಡುವ ದೃಷ್ಟಿಯಿಂದ ಅಂತಹ ಎಲ್ಲಾ ವಾಹನಗಳನ್ನೂ ಸ್ಕ್ರಾಪ್ ಗೊಳಿಸುದಕ್ಕೆ ಪ್ರಯತ್ನಿಸುವುದು ಉತ್ತಮ. ಅದೇ ಪ್ರಕಾರ ಕಾರ್ಖಾನೆಗಳು ಹೊರಸೂಸುವ ಮಾಲಿನ್ಯವನ್ನು ಶುದ್ಧೀಕರಿಸಿ ಬಿಡುವದನ್ನು ಕಡ್ಡಾಯಗೊಳಿಸುವುದು ಬಹಳ ಉತ್ತಮ. ಈ ಸಮಯ ಅದಕ್ಕೆ ಯೋಗ್ಯ. ಏಕೆಂದರೆ ಕಾರ್ಖಾನೆಗಳು ಪ್ರಸ್ತುತ ಪುನರ್ ಪ್ರಾರಂಭದ ಹೊಸ್ತಿಲಲ್ಲಿರುವುದರಿಂದ ಅಥವಾ ಪ್ರಾರಂಭದ ಮೊದಲ ಹಂತದಲ್ಲಿರುವುದರಿಂದ ಯಾವ್ಯಾವ ಕಾರ್ಖಾನೆ, ಉದ್ದಿಮೆಗಳು ಮಲಿನತೆ ತಗ್ಗಿಸುವ ಕ್ರಮಗಳನ್ನು ಕೈಗೊಂಡಿಲ್ಲವೋ ಅವೆಲ್ಲವೂ ಕೂಡಾ ಅಂತಹ ಕ್ರಮಗಳನ್ನು ಕೈಗೊಂಡ ನಂತರವೇ ಸ್ಥಳೀಯ ಸ್ವ ಸರ್ಕಾರಗಳು, ಪರಿಸರ ನೀರೀಕ್ಷಕರ ಒಪ್ಪಿಗೆಯ ಪುನರ್ ನವೀಕರಣದ ದಾಖಲೆ ನೀಡುವುದು ಶ್ರೇಯಸ್ಕರ. ಆದರೆ ಲಂಚದಂತಹ ಕೆಟ್ಟ ಸಂಪ್ರದಾಯವನ್ನು ನಿಲ್ಲಿಸುವ ದೃಷ್ಟಿಯಿಂದ ಈ ಎಲ್ಲಾ ಪ್ರಕ್ರಿಯೆಗಳಲ್ಲಿ ತಂತಮ್ಮ ಮೊಬೈಲುಗಳಿಂದ ದಿನಾಂಕದ ದಾಖಲೆಗಳೊಂದಿಗೆ ಪೂರ್ಣ ಮಾಹಿತಿಯನ್ನು ಕಳುಹಿಸುವವರಿಗೆ ಮಾತ್ರ ಆನ್ ಲೈನ್ ನಲ್ಲಿ ಒಪ್ಪಿಗೆಯನ್ನು ಇಲಾಖೆ, ಅಧಿಕಾರಿಗಳು ನೀಡುವದನ್ನು ಹಾಗೂ ಆಯಾ ಪ್ರದೇಶದ ತಹಸೀಲ್ದಾರ್ /ಜಿಲ್ಲಾಧಿಕಾರಿಗಳು ಅದನ್ನು ಪ್ರಮಾಣೀಕರಿಸಿದ ತರುವಾಯವೇ ಮೇಲ್ಕಂಡವುಗಳಿಗೆ ಪರಿಸರದ ಪರವಾನಿಗೆ ನೀಡುವಂತಾಗಬೇಕು.

ಹಲವಾರು ಉದ್ಯಮ, ಕಾರ್ಖಾನೆಗಳು ಹೊರ ಸೂಸುವ ಮಾಲಿನ್ಯ ಕಾರಕ ನೆಲ, ಜಲ. ಗಾಳಿ ಅಂಶಗಳಿಂದಾಗಿ ಪರಿಸರವೂ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಿರುಗಿತ್ತು. ಆದರೆ ಕೊರೊನಾದ ಲಾಕ್ ಡೌನ್ ನಿಂದಾಗಿ ಕಾರ್ಖಾನೆಗಳು, ವಾಹನಗಳು ಸ್ತಬ್ಧಗೊಂಡಾಗ ಪರಿಸರ ತÀನ್ನಿಂದ ತಾನಾಗಿ ಮಾಲಿನ್ಯದಿಂದ ಮುಕ್ತಗೊಂಡಿತು. ಇದರಿಂದಾಗಿ ಸ್ವಚ್ಛಗೊಂಡ ಗಾಳಿ, ನೀರು, ನೆಲದಿಂದಾಗಿ ಎಲ್ಲವೂ ಬಹಳ ಸುಂದರಗೊಂಡಿತು. ಗಂಗೆ ರಾಸಾಯನಿಕ ರಹಿತಗೊಂಡು ಶುಚೀರ್ಭೂತಳಾದಳು. ವಾಯುವು ಮಾಲಿನ್ಯದಿಂದ ಶುದ್ಧಗೊಂಡು ಬಹಳ ದೂರದ ಬೆಟ್ಟ, ಗುಡ್ಡ, ಪರ್ವತಗಳೆಲ್ಲವೂ ಬಹಳ ಹತ್ತಿರದಲ್ಲಿರುವಂತೆ ಕಾಣಹತ್ತಿದವು. ಮನುಷ್ಯರ ಅಶುದ್ಧತೆ, ಅವ್ಯವಸ್ಥೆ, ಕಂಡ ಕಂಡಲ್ಲಿ ಬಿಸಾಡುವ, ಮಲಿನಗೊಳಿಸುವ ವಸ್ತುಗಳು, ಕೊಳಚೆ, ಕಶ್ಮಲಗಳು ಇಲ್ಲದ ಕಾರಣ ನೆಲ, ಸ್ಥಳ ಸ್ವಚ್ಛಗೊಂಡು ಪರಿಶುದ್ಧ ಪ್ರದೇಶಗಳು ಎಲ್ಲ ಕಡೆ ಗೋಚರಿಸಹತ್ತಿತು.

ಜನರ ಓಡಾಟ, ನಲಿದಾಟ, ರಂಪಾಟ, ತಿರುಗಾಟಗಳು ಕಡಿಮೆಯಾದಂತೆ ದೂರದಲ್ಲಿ ಹೆದರಿಕೊಂಡಿದ್ದ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಟ್ಟು ಸ್ವಚ್ಛಂದವಾಗಿ ವಿಹರಿಸಹತ್ತಿದ್ದನ್ನು ಸ್ವತ ಜನರು ಕಣ್ಣಾರೆ ಕಾಣುವಂತಾಯಿತು. ವಾಹನಗಳ ಓಡಾಟ ಕ್ಷೀಣಿಸಿದಂತೆ ಕಾಡಿನ ರಸ್ತೆಗಳಲ್ಲಿ ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದುದನ್ನು ಜನರು ಕಂಡು ಆನಂದತುಂದಿಲರಾದರು. ಅಂತೂ 3-4 ತಿಂಗಳ ಬಿಡುವು ಪರಿಸರಕ್ಕೆ ಬಹಳ ಕೊಡುಗೆಯನ್ನು ಇತ್ತಿದೆ. ಇದೀಗ ಪಟ್ಟಣ-ನಗರಗಳಿಂದ ಊರ ಮನೆ ಸೇರಿಕೊಂಡ ಹಲವಾರು ಕುಟುಂಬಗಳು ಹಳ್ಳಿಯ ಸುಂದರ ಪರಿಸರಕ್ಕೆ ಮಾರುಹೋಗಿ ಇದುವರೆಗೆ ಹಡೀಲು ಬಿಟ್ಟಿದ್ದ ಗದ್ದೆ-ತೋಟ ಪ್ರದೇಶಗಳಲ್ಲಿ ಮತ್ತೆ ಬೆಳೆ ಬೆಳೆಸಿ, ಬೆಳಗುವ ಮನಸ್ಸು ಮಾಡಿರುವುದು ಪರಿಸರಕ್ಕೆ ಮಹಾನ್ ಕೊಡುಗೆಯನ್ನು ಕೊಟ್ಟಂತಾಗಿದೆ. ಖಾಲಿಯಾಗಿ ಗದ್ದೆ, ಗುಡ್ಡೆಗಳು ಹಚ್ಚಹಸಿರಾಗಿ ನಂದನವನಗಳಂತಾಗಿವೆ. ಮನುಷ್ಯರಿಗೆ ಸ್ವಲ್ಪ ತೊಂದರೆದಾಯಕವಾದರೂ ಕೂಡಾ, ಇದೆಲ್ಲವೂ ಪರಿಸರದ ಅಂದಕ್ಕೆ ಕೊರೊನಾದ ಕೊಡುಗೆಯಲ್ಲವೇ?

ಸ್ವಚ್ಛ-ಸುಂದರ-ಸುಮನೋಹರ ಪರಿಸರವನ್ನು ಸದಾ ಉಳಿಸಿಕೊಂಡು ಮುಂದಿನ ಪೀಳಿಗೆಗೆ ನೀಡುವುದಕ್ಕಾಗಿ ಸಮಯ ಮುಗಿದಿರುವ ವಾಹನಗಳನ್ನು ಹಿಂತೆಗೆಯ ಬೇಕು. ರಾಸಾಯನಿಕ ಹೊಗೆ,ಕೊಳಕು, ನೀರು,ಇತ್ಯಾದಿ ಹೊರಸೂಸುವ ಕೈಗಾರಿಕೆ, ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಶುದ್ಧೀಕರಿಸದೇ ಏನನ್ನೂ ಹೊರಬಿಡದಂತೆ ಮಾಡಬೇಕಾಗಿದೆ. ಇಲ್ಲಿ ಇಡೀ ವಿಶ್ವದ ಸಮಷ್ಠಿ ಜನರ ಹಿತವೂ ಅಡಗಿದೆ.

ಲೇಖನ : ರಾಯೀ ರಾಜ ಕುಮಾರ್, ಮೂಡುಬಿದಿರೆ - ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here