Saturday 10th, May 2025
canara news

*ಯಕ್ಷಲೋಕದ ಛಂದೋಬ್ರಹ್ಮ ಶಿಮಂತೂರು ಡಾ.ಎನ್ ನಾರಾಯಣ ಶೆಟ್ಟಿ ಅಸ್ತಂಗತ*

Published On : 26 Aug 2020   |  Reported By : Roshan Kinnigoli


ಯಕ್ಷಗಾನ ಛಂದೋಬ್ರಹ್ಮ ಡಾ. ಎನ್. ನಾರಾಯಣ ಶೆಟ್ಟಿ ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.

ಎಳತ್ತೂರು ಗುತ್ತು ದಿ. ಅಚ್ಚಣ್ಣ ಶೆಟ್ಟಿ ಮತ್ತು ನಂದಿಕೂರು ಚೀಂಕ್ರಿಗುತ್ತು ದಿ. ಕಮಲಾಕ್ಷಿ ಶೆಡ್ತಿ ದಂಪತಿಯ ಪುತ್ರನಾಗಿ 1934 ಫೆಬ್ರವರಿ 1 ರಂದು ಕಾರ್ಕಳ ತಾಲೂಕು ನಂದಿಕೂರಿನಲ್ಲಿ ಜನಿಸಿದ್ದರು.

ಡಾ. ಎನ್. ನಾರಾಯಣ ಶೆಟ್ಟಿ ಅವರು ಐದನೇ ತರಗತಿ ಯಲ್ಲಿದ್ದಾಗ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು. ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋ ನು ಶಾಸನಗಳನ್ನು ಅಧ್ಯಯನ ಮಾಡಿದ್ದರು.

ಛಂದಸ್ಸಿನ ಬಗೆಗೆ ಅಪಾರವಾದ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿ. ಲಿಟ್. ಪದವಿ ಪಡೆದಿದ್ದರು. ಯಕ್ಷಗಾನ ಸಾಹಿತ್ಯದಲ್ಲಿ ಅಪಾರ ಜ್ಞಾನ ಗಳಿಸಿದ್ದರು ಅಪಾರ ಶಿಷ್ಯರಲ್ಲಿ ಹೊಂದಿದ್ದು ಹಲವಾರು ಶಿಷ್ಯರನ್ನು ಯಕ್ಷಗಾನದ ನುರಿತರನ್ನಾಗಿ ಬೆಳೆಸಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಸದಸ್ಯರಾಗಿದ್ದರು. ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ದೇರಾಜೆ ಸ್ಮತಿ ಗೌರವ, ಕುಕ್ಕಿಲ ಪ್ರಶಸ್ತಿ, ಸನಾತನ ಪ್ರಶಸ್ತಿ, ಅಗರಿ ಪ್ರಶಸ್ತಿ, ಶ್ರೇಷ್ಠ ಯಕ್ಷಗಾನ ಸಾಹಿತ್ಯ ಸಾಧನಾ ಪ್ರಶಸ್ತಿ, ವಿಂಶತಿ ತಮ ವಿದ್ವತ್ ಪ್ರಶಸ್ತಿ, ಸ್ಕಂದ ಪುರಸ್ಕಾರ, ತಲ್ಲೂರು ಕನಕಾ-ಅಣ್ಣಯ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುದ್ದಣ ಪುರಸ್ಕಾರ, ಕಲ್ಕೂರ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಅಭಿನವ ನಾಗವರ್ಮ, ಯಕ್ಷಪಾಣಿನಿ, ಛಂದೋಂಬುಧಿ ಚಾರು ಚಂದ್ರ, ಛನಶ್ಚತುರಾನನ, ಯಕ್ಷ ಛಂಧೋ ಭಾರ್ಗವ, ಛಂದೋ ವಾರಿಧಿ ಚಂದ್ರ ಇಂತಹ ಹಲವಾರು ಪ್ರಶಸ್ತಿ, ಬಿರುದುಗಳನ್ನು ಹೊಂದಿದ್ದಾರೆ.

ವಿಚಿತ್ರಾ ತ್ರಿಪದಿ, ಕನ್ನಡದ ಅನಘ ಛಂದೋ ರತ್ನಗಳು, ಯಕ್ಷಗಾನ ಛಂದೋಂಬುಧಿ ಕೃತಿಗಳನ್ನು ರಚಿಸಿದ್ದಾರೆ. ಕಟೀಲು ಕ್ಷೇತ್ರ ಮಹಾತ್ಮೆ, ದೀಕ್ಷಾ ಕಂಕಣ, ರಾಜಮುದ್ರಿಕಾ, ಬಿದ್ಸ್‌ದ ಬೈರವೆರ್, ಸೊರ್ಕುದ ಸಿರಿಗಿಂಡಿ ಮುಂತಾದ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here