ಶತಾಯುಷ್ಯದತ್ತ ಹೆಜ್ಜೆಯನ್ನಿಡುವ ಆಟ ಟೀಚರ್ ವಸಂತಿ ಎನ್.ಉಚ್ಚಿಲ್
ಮುಂಬಯಿ (ಆರ್‍ಬಿಐ), ಆ.28: ಮಂಗಳೂರುನ ಬೆಸೆಂಟ್ ಶಾಲೆಯಲ್ಲಿ ಶಿಸ್ತು, ದಕ್ಷತೆಗೆ ಹೆಸರಾದ, ಈಗಲೂ ಸಹ ಶಿಕ್ಷಕಿಯರು, ವಿದ್ಯಾಥಿರ್üನಿಯರು ಸ್ಮರಿಸಿಕೊಂಡು ಕಾಣ ಬರುವ ಆಟ ಟೀಚರ್... ಪಿಟಿ ಹಾಗೂ ಗೈಡಿಂಗ್ ಟೀಚರ್ ಇಂದು ತನ್ನ ಜೀವನದ 99ಕ್ಕೆ ಕಾಲಿರಿಸುತ್ತಿದ್ದಾರೆ. ಮಂಗಳೂರಲ್ಲಿ ತಂದೆಯ ಕುಟುಂಬಸ್ಥÀರಿಗೆ ಪ್ರೀತಿಯ ವಸಂತಾ. ತಾಯಿಯ ಕುಟುಂಬ ಹಾಗೂ ಶಾಲೆಯಲ್ಲಿ ವಸಂತಿ... ಸಹಶಿಕ್ಷಕರು ಮತ್ತು ವಿದ್ಯಾಥಿರ್üಗಳ ಮುದ್ದಿನ ಆಟ ಟೀಚರ್ ವಸಂತಿ ನಾರಾಯಣ್ ಉಚ್ಚಿಲ್... ಡಾ| ಶಿವರಾಮ ಕಾರಂತರ ಮುಂಬಯಿಯ ಕೊನೆ ಭೇಟಿಯಲ್ಲಿ, ಡಾ| ನಿಂಜೂರು ಮನೆಯಲ್ಲಿ ಅವರನ್ನು ಕಾಣ ಹೋಗಿ, ನಾನು (ಶ್ಯಾಮಲಾ ಮಾಧವ್) ಬೆಸೆಂಟ್ ಶಾಲೆಯ ವಸಂತಿ ಟೀಚರ್ ಮಗಳೆಂದು ಪರಿಚಯಿಸಿಕೊಂಡಾಗ, `ಓ ! ಆಟ ಟೀಚರ್! ಸಚ್ ಅ ಡಿಸಿಪ್ಲಿನ್ಡ್ ಲೇಡಿ! ಈಗ ಅಂಥವರು ಎಲ್ಲಿ?' ಎಂದು ಉದ್ಗರಿಸಿದ್ದರು!
ಮೂರು ತಿಂಗಳ ಪ್ರಾಯದಲ್ಲೇ ತಂದೆಯನ್ನು ಕಳಕೊಂಡ ನಮ್ಮಮ್ಮ, ತಂದೆಯ ಮನೆಯಾದ ಮಂಗಳೂರ ಸೀಗೆ ಬಲ್ಲೆ ಹೌಸ್ ನಲ್ಲೇ ಶೈಶವ ಹಾಗೂ ಬಾಲ್ಯದ ಆರು ವರ್ಷಗಳನ್ನು ಕಳೆದರು. ಸೀಗೆ ಬಲ್ಲೆ ಹೌಸ್, ನಮ್ಮೂರಿಗೆ, ಊರಜನರಿಗೆ ವಿದ್ಯೆಯ ಬೆಳಕನ್ನಿತ್ತ ನಮ್ಮ ಮುತ್ತಜ್ಜ ಮಂಜಪ್ಪ ಅವರ ಮನೆ. ಸೇಲಂನಲ್ಲಿ ನ್ಯಾಯಾಧೀಶರಾಗಿದ್ದ ತನ್ನ ದೊಡ್ಡಪ್ಪ ರಾವ್ ಬಹದ್ದೂರ್ ರಾಮಪ್ಪ ಅವರಿಗೆ ಪತ್ನಿ ವಿಯೋಗವಾಗಿ ಅವರ ಎಳೆಯ ಹೆಣ್ಮಕ್ಕಳೂ ಇಲ್ಲಿ ಸೀಗೆ ಬಲ್ಲೆ ಹೌಸ್ ನಲ್ಲಿ ಸೋದರತ್ತೆ ದೇವಮ್ಮನ ಆಶ್ರಯಲ್ಲಿದ್ದರು. ರಜಾದಿನಗಳಲ್ಲಿ ಈ ಸೋದರಿಯರೊಡನೆ ಒಂದಾಗಿ ಸೇಲಂ, ಏರ್ಕಾಡ್‍ಗಳ ಎಸ್ಟೇಟ್‍ಗೆ ಹೋಗುತ್ತಿದ್ದುದನ್ನು, ಅಲ್ಲಿನ ಹಣ್ಣುಗಳ ತೋಟಗಳಲ್ಲಿ ತಮ್ಮ ಸುತ್ತಾಟವನ್ನೂ ಅಮ್ಮನ ಮಾತುಗಳಲ್ಲಿ ಕೇಳಿದ್ದೇವೆ. ರಾತ್ರೆ ನಿದ್ರೆ ಬಾರದ ದೊಡ್ಡಪ್ಪನಿಗೆ ಮನೆಯ ಹಸುವಿನ ತಾಜಾ ಹಾಲಿನ ಚಾ ಸಿದ್ಧವಾದಾಗ `ವಸಂತಾ, ಲಕ್ಷ್ಮೀ, ಮೀನಾ, ಏಳಿ, ಬನ್ನಿ, ಚಾ ಕುಡಿದು ಮಲಗಿ' ಎಂದು ದೊಡ್ಡಪ್ಪ ಎಬ್ಬಿಸುತ್ತಿದ್ದುದನ್ನು ಅಮ್ಮ ಸ್ಮರಿಸುತ್ತಾರೆ. ತನ್ನ ಕೊಪ್ಪಳ ಚಿಕ್ಕಮ್ಮನ ಬಳಿಗೆ ರಜಾದಿನಗಳಲ್ಲಿ ಹೋಗುತ್ತಿದ್ದುದನ್ನೂ, ಅವರ ಪ್ರೀತಿ, ವಾತ್ಸಲ್ಯವನ್ನೂ ಅಮ್ಮ ನೆನೆಯುತ್ತಾರೆ.
ಅಮ್ಮನ ಮುಂದಿನ ಆರು ವರ್ಷಗಳು ಮಂಗಳೂರ ಇನ್ನೋರ್ವ ದೊಡ್ಡಪ್ಪ ಪರಮೇಶ್ವರರ ಮನೆ, ತುಳಸೀ ವಿಲಾಸದಲ್ಲಿ. ಎಕ್ಸೈಸ್ ಇನ್ಸ್ಪೆಕ್ಟರ್ ಆಗಿದ್ದ ದೊಡ್ಡಪ್ಪನ ಈ ವಿಶಾಲ ಬಂಗಲೆಯನ್ನು ನಿಂತು ಕಟ್ಟಿಸಿದವರು, ಅಮ್ಮನ ತಂದೆಯೇ. ಆಗ ಗಂಜಾಂನಲ್ಲಿ ಇನ್ಸ್‍ಪ್ಪೆಕ್ಟರ್ ಆಗಿದ್ದ ಈ ದೊಡ್ಡಪ್ಪನ ಬಂಗಲೆ ತುಳಸೀ ವಿಲಾಸದಲ್ಲೂ ಸೀಗೆ ಬಲ್ಲೆ ಹೌಸ್ ನಂತೇ ಊರಿನಿಂದ ವಿದ್ಯಾಭ್ಯಾಸಕ್ಕಾಗಿ ಬಂದು ಮನೆ ತುಂಬಿದ ವಿದ್ಯಾಥಿರ್üಗಳು. ಒಟ್ಟು ಇಪ್ಪತ್ತೈದು ಜನರಿದ್ದ ಮನೆಯಲ್ಲಿ ಎಲ್ಲ ಊಟದ ಬಟ್ಟಲುಗಳಿಗೂ ತಾನು ಅಮ್ಮನೆಂದೇ ಕರೆಯುತ್ತಿದ್ದ ದೊಡ್ಡಮ್ಮ, ಹೇಗೆ ಒಂದೇ ಪ್ರಕಾರ ಬಡಿಸುತ್ತಿದ್ದರು ಎಂದು ಅಮ್ಮ ನೆನಪಿಸಿಕೊಳ್ಳುತ್ತಾರೆ. ಅವರ ತುಳಸೀ ಪೂಜೆಯ ನಿಷ್ಠೆಯನ್ನೂ ಅಮ್ಮ ಸ್ಮರಿಸುತ್ತಾರೆ. ತುಳಸೀ ಕಟ್ಟೆಯ ಬಳಿ ತಿಟ್ಟೆಯ ಮೇಲೆ ತಟ್ಟೆಯಲ್ಲಿ ದೊಡ್ಡಪ್ಪ ನಿಗಾಗಿ ಮಾವಿನೆಲೆಯಲ್ಲಿ ಉಪ್ಪಿನ ಹರಳುಗಳು. ಅದರಿಂದ ಉಜ್ಜಿದ ಅಜ್ಜನ ಹಲ್ಲುಗಳು ಕೊನೆವರೆಗೂ ಕ್ಷೀಣಿಸದೆ ಸಧೃಢವಾಗಿದ್ದುದನ್ನೂ ಅಮ್ಮ ನೆನೆಯುತ್ತಾರೆ.
ಮೆಟ್ರಿಕ್ ಬಳಿಕ ಕಾಲೇಜ್ ಸೇರುವ ಹಂಬಲವಿದ್ದರೂ, ಅದು ಫಲಿಸದೆ, ಸೋದರತ್ತೆಯ ಆದೇಶದಂತೆ ಟೀಚರ್ಸ್ ಟ್ರೇನಿಂಗ್ ಮಾಡಿದರು, ಅಮ್ಮ. ಶಿಕ್ಷಕಿಯಾಗುವ ಅವಕಾಶಕ್ಕಾಗಿ ಬೆಸೆಂಟ್ ಶಾಲೆಗೆ ಹೋದಾಗ, ಕರೆಸ್ಪಾಂಡೆಂಟ್ ಏಕಾಂಬರರಾಯರು, ಮದರಾಸಿನ ವೈಎಂಸಿಎ ಇಲ್ಲಿ ಪಿ.ಟಿ ಟ್ರೇನಿಂಗ್ ಮಾಡಿ ಬರುವಂತೆ ಆದೇಶಿಸಿದರು. ಅಂತೆಯೇ ಅಲ್ಲಿ ಪಿ.ಟಿ ಹಾಗೂ ಗೈಡಿಂಗ್ ತರಬೇತಿ ಪಡೆದ ಅಮ್ಮನಿಂದ ಅಲ್ಲಿನ ಪ್ರಿನ್ಸಿಪಾಲ್ ಆಂಗ್ಲ ಮಹಿಳೆ ಮಿಸ್ ಸ್ ಬುಕ್ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಅಮ್ಮನ ಬಾಯಲ್ಲಿದ್ದ ಕೋರೆ ಹಲ್ಲೊಂದನ್ನು ತಾನೇ ಡೆಂಟಿಸ್ಟ್ ಬಳಿಗೆ ಕರೆದೊಯ್ದು ತೆಗೆಸಿದ ಮಿಸ್‍ಸ್ ಬಕ್, ಅಮ್ಮನ ಪಾದದಲ್ಲಿ ಜನ್ಮತಃ ಒಂದಕ್ಕೊಂದು ಅಂಟಿಕೊಂಡಿದ್ದ ಉಂಗುರ ಬೆರಳು ಮತ್ತು ನಡುಬೆರಳನ್ನು ಶಸ್ತ್ರಕ್ರಿಯೆಯಿಂದ ಬೇರ್ಪಡಿಸ ಹೊರಟಿದ್ದರು. ವೈಎಂಸಿಎ ಯ ಎಲ್ಲ ಶಿಸ್ತು, ಪರಿಣತಿಯೊಂದಿಗೆ ಹಿಂದಿರುಗಿದ ಅಮ್ಮ, ಬೆಸೆಂಟ್ ಶಾಲೆಯನ್ನು ಕ್ರೀಡೆ ಹಾಗೂ ಗೈಡಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆಸಿದ್ದು, ದಸರಾ ಸ್ಪೋರ್ಟ್ಸ್, ಇಂಟರ್‍ಸ್ಕೂಲ್ ಟೂರ್ನಮೆಂಟ್‍ಗಳಲ್ಲಿ ಶೀಲ್ಡ್‍ಗಳೂ, ಪ್ರೆಸಿಡೆಂಟ್‍ಗೈಡ್ ಬ್ಯಾಜ್‍ಗಳೂ ಶಾಲಾ ತಂಡ ಹಾಗೂ ವಿದ್ಯಾಥಿರ್üಗಳನ್ನು ಅಲಂಕರಿಸಿದುವು.
ಬೆಳ್ಳನೆ ನೀಳ ಕಾಯದ, ನೆಟ್ಟನೆ ನಿಲುವಿನ, ಗಂಭೀರ ನಡೆಯ, ಶುಭ್ರಶ್ವೇತವಸನರಾದ ನಮ್ಮ ತಂದೆ, ಅಮ್ಮನ ತುಳಸೀ ವಿಲಾಸದಮ್ಮನ ಅಣ್ಣನ ಮಗ.. ಪರಸ್ಪರ ಮೆಚ್ಚಿಕೊಂಡ ಅವರ ವಿವಾಹವನ್ನು ನಡೆಸಿಕೊಟ್ಟವರು, ಅಮ್ಮನ ಉಚ್ಚಿಲದ ತಲೆಬಾಡಿ ಮಾವಂದಿರು. 1946 ಆಗಸ್ಟ್ ಮೂವತ್ತರ ಆ ಚೌತಿಯ ಹಬ್ಬದಂದು ರೈಲು ಸಂಚಾರ ಅದೇಕೋ ಇರದಿದ್ದರೂ, ಶಾಲೆಯ ಸಹಶಿಕ್ಷಕರೂ, ವಿದ್ಯಾರ್ಥಿಗಳೂ ನಡೆದುಕೊಂಡೇ ಬಂದು ಮದುವೆ ಸಮಾರಂಭದಲ್ಲಿ ಹಾಜರಿದ್ದರು.
ಶಿಸ್ತು, ಕಠಿಣ ಪರಿಶ್ರಮಕ್ಕೆ ಹೆಸರಾದ ಟೀಚರ್ ನಮ್ಮಮ್ಮ, ಬೆಸೆಂಟ್ ಶಾಲೆಯ ಸೋಪಾನಗಳುದ್ದಕ್ಕೂ, , ಶಾಲಾ ಆವರಣದೊಳಗಿನ ನಮ್ಮ ಮನೆಯಂಗಳದಲ್ಲೂ ನೆಟ್ಟು ಬೆಳೆಸಿದ ಹೂತೋಟದ ಸೊಬಗು ಅತಿಶಯ! ದಿನವಿಡೀ ಗೇಮ್ಸ್ ಪೀರಿಯಡ್‍ಗಳು ಕೊನೆಗೆ ಸಂಜೆ ಆಫ್ಟರ್ ಕ್ಲಾಸ್ ಗೇಮ್ಸ್, ನಂತರ ಗೈಡಿಂಗ್.. ಹೀಗಾಗಿ ಅಮ್ಮ ಮನೆ ಹೊಗುತ್ತಿದ್ದುದು ಸಂಜೆ ಆರೂವರೆಯ ಬಳಿಕ..ಮತ್ತೆ ತಡರಾತ್ರಿಯ ವರೆಗೆ ಅಮ್ಮ ಮನೆಗೆಲಸದ ದುಡಿವ ಯಂತ್ರ. ವರ್ತಕ ವಿಲಾಸದ ದಿನದ ದುಡಿಮೆಯ ಕೊನೆಗೆ ಸಂಜೆ ಐದೂವರೆಯ ರೈಲಲ್ಲಿ ಊರಿಗೆ ಹೋಗಿ ಶಾಲಾ ಕೆಲಸಗಳನ್ನು ನೋಡಿ ರಾತ್ರಿ ಹನ್ನೊಂದರ ರೈಲಿನಲ್ಲಿ ಹಿಂದಿರುಗುತ್ತಿದ್ದ ತಂದೆಯವರು, ಶಾಲಾ ಕರೆಸ್ಪಾಂಡೆಂಟರಾಗಿ ತನುಮನದಿಂದ ದುಡಿದವರು. ಅವರು ಹಿಂದಿರುಗಿದ ಬಳಿಕವೇ ಅಮ್ಮನ ಊಟ. ತೀವ್ರ ಅಸ್ತಮಾ ರೋಗಿಯಾಗಿದ್ದ ತಂದೆಯವರು ರಾತ್ರಿ ನಿದ್ರಿಸುವುದು ಕಷ್ಟ ಸಾಧ್ಯವಿತ್ತು. ಉಬ್ಬಸ ಉಲ್ಬಣಿಸಿದಾಗಲೆಲ್ಲ ಔಷಧಿ, ಸರಿರಾತ್ರಿ ಯಲ್ಲಿ ಕಾಫಿ ಮಾಡಿ ಕುಡಿಸಿ, ಬೆನ್ನು ನೀವಿ ಗಾಳಿ ಹಾಕಿ ಆರೈಕೆ ಮಾಡುವ ಅಮ್ಮ!
ಹೆಡ್ ಮಿಸ್ಟ್ರೆಸ್ ಹಾಗೂ ಗೆಳತಿ ನಮ್ಮ ಪ್ರೀತಿಯ ರಾಧಾ ಎಲ್.ರಾವ್ ಹಾಗೂ ಅಮ್ಮನ ಗೆಳತಿಯಾದ ಟೀಚರ್ ಭಾಮಾಂಟಿಯಿಂದ ತೊಡಗಿ ಮನೆಗೆ ಬಂದು ಹೋಗುತ್ತಿದ್ದ ಶಿಕ್ಷಕರು; ಅಮ್ಮನ ಮಂಗಳೂರು ಬಂಧುಗಳು; ನಮ್ಮ ಪ್ರೀತಿಯ ಶಾರದತ್ತೆ; ಶಾಲಾ ಸಂಬಂಧ ತಂದೆಯವರನ್ನು ಸಿಗಲು ಬರುತ್ತಿದ್ದ ಊರ ಹಿರಿ ಕಿರಿಯರು, ಬೆಸೆಂಟ್ ಶಾಲೆಯ ಸ್ಕೂಲ್ ಡೇ, ವಸಂತೋತ್ಸವ ದ ತಯಾರಿಯ ಬಿಡುವಿರದ ಕೆಲಸಗಳು, ಇವೆಲ್ಲದರ ನಡುವೆ ಅಮ್ಮನ ಕೆಲಸ ನಡೆದೇ ಇರುತ್ತಿತ್ತು.
ಕಾಡಿದ ತೀವ್ರ ಅಸ್ತಮಾ, ಎಪ್ಪತ್ತೈದರ ಹರೆಯದಲ್ಲೆರಗಿದ ಭೀಕರ ಅಪಘಾತ , ಮತ್ತೆ ಕಾಣಿಸಿಕೊಂಡ ಬ್ಲಡ್ ಕ್ಯಾನ್ಸರ್, ಕೊನೆಗೂ ನಮ್ಮ ತಂದೆಯವರನ್ನು ನಮ್ಮಿಂದಗಲಿಸಿತು. ಸದಾ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಸದಾ ಚೆನ್ನಿರುವೆನೆಂದೇ ಹೇಳುತ್ತಾ ಧೀಮಂತರಾಗಿ ಬಾಳಿದ ಅವರನ್ನು ಕಳಕೊಂಡು ಇಪ್ಪತ್ತು ವರ್ಷಗಳೇ ಸಂದಿವೆ. ಅವರು ಕಟ್ಟಿ ನಿಲ್ಲಿಸಿದ ಮನೆಗಾಗಿ ಅದೇ ಶಿಸ್ತು, ಜೀವನ ಶ್ರದ್ಧೆಯಿಂದ ಬಾಳಿ ಬದುಕುತ್ತಿದ್ದಾರೆ, ನಮ್ಮಮ್ಮ. ಹೆಚ್ಚಿಗೆ ಮಾತಿರದ, ಶಿಸ್ತಿನ ವಾತಾವರಣದಲ್ಲಿ ಬೆಳೆದ ನಾವು ಹಿರಿಯರಿಂದ ಕೇಳಿ ಅರಿತಿರಬೇಕಾದ ಮಹತ್ವಪೂರ್ಣ ಪೂರ್ವೇತಿಹಾಸವನ್ನು ಕೇಳಿ ನಮ್ಮದಾಗಿಸಿಕೊಳ್ಳಲಿಲ್ಲ ಎಂಬ ಖೇದ ನಮ್ಮದು. ಮಾತು, ಉಚ್ಚಾರ, ನೆನಪು ಎಲ್ಲವೂ ಈಗಲೂ ಸ್ಫುಟವಾಗಿರುವ ಅಮ್ಮ, ಈಗ ಕೇಳಿದರೆ, " ಯಾಕೆ ಅದೆಲ್ಲ? ಅದನ್ನೂ ಬರೆಯಲಿದೆಯೇನು?" ಅನ್ನುವವರು. ನಮಗೋ, ಗತ ಇತಿಹಾಸ ಬಹಳ ಮುಖ್ಯ. ಅದೆಲ್ಲವನ್ನೂ ಅರಿವ ದಾರಿ ಸದಾ ತೆರೆದಿರಲಿ, ಎಂದಾಶಿಸುತ್ತಾ, ಇಂದು ಅಮ್ಮನ ಬಳಿ ಇರಲಾಗದ ಈ ಪರಿಸ್ಥಿತಿ, ಬೇಗನೇ ಹಿಂದಿನಂತಾಗುವಂತೆ ಶುಭದಿನಗಳು ಮರಳಲೆಂದೇ ಪ್ರಾರ್ಥನೆ.