ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಸಮೀಪದ ಕೊಲಕಾಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ಶಶಿ ಆರ್. ಆಚಾರ್ಯ (55) ಎಂದು ಗುರುತಿಸಲಾಗಿದೆ.
ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಭಾನುವಾರ ಬೆಳಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಯ ಒಳಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಭಾನುವಾರ ಬೆಳಗ್ಗಿನಿಂದಲೇ ಮಹಿಳೆ ನಾಪತ್ತೆಯಾಗಿರುವುದನ್ನು ಕಂಡು ಸ್ಥಳೀಯರು ಹುಡುಕಾಟ ನಡೆಸಿದಾಗ ಮಹಿಳೆಯ ಶವ ಬಾವಿಯಲ್ಲಿ ಪತ್ತೆಯಾಗಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಆಪದ್ಬಾಂಧವ ಆಸಿಫ್ ನೇತೃತ್ವದ ಕಾರ್ನಾಡು ಮೈಮುನಾ ಫೌಂಡೇಶನ್ ಸಿಬ್ಬಂದಿ ಮುಸ್ತಕ್ ಮತ್ತು ದಾವೂದ್ ಆವರಣವಿಲ್ಲದ ಅಪಾಯಕಾರಿ ಹಳೆ ಕಾಲದ ಬಾವಿಗೆ ಇಳಿದು ಮಹಿಳೆಯ ಶವವನ್ನು ಮೇಲಕ್ಕೆತ್ತುವುದರಲ್ಲಿ ಸಹಕರಿಸಿದ್ದಾರೆ.
ಮೃತ ಮಹಿಳೆಯ ಮನೆಯಲ್ಲಿ ಪತಿ ರತ್ನಾಕರ್ ಆಚಾರ್ಯ ಇಬ್ಬರೇ ವಾಸವಿದ್ದು, ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಬಡತನದ ಕುಟುಂಬವಾಗಿದ್ದು, ಪತ್ನಿಯ ಮರಣದಿಂದ ರತ್ನಾಕರ ಆಚಾರ್ಯ ಅವರ ರೋಧನ ಮುಗಿಲು ಮುಟ್ಟಿದೆ.
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.