Friday 19th, April 2024
canara news

ಶಾಲೆಯ ವಠಾರಕ್ಕೆ ಬಂದ ವಿದ್ಯಾಗಮ

Published On : 08 Sep 2020


ಕೋವಿಡ್/ ಕೊರೊನಾ ಪ್ರಾರಂಭವಾದಾಗಿನಿಂದ ಶಿಕ್ಷಣದ ಶಾಲೆಗಳಿಂದ ದೂರವಿದ್ದ ವಿದ್ಯಾರ್ಥಿಗಳು ಕೊನೆಗೂ ಶಿಕ್ಷಣ ಸಂಸ್ಥೆಯ ವಠಾರಕ್ಕೆ ಬರಲು ಶಿಕ್ಷಣ ಸಚಿವರು ಒಪ್ಪಿಗೆ ಕೊಟ್ಟಿರುತ್ತಾರೆ. ಆದರೆ ಶಾಲೆಯ ಆರಂಭಕ್ಕೆ ಒಪ್ಪಿಗೆ ಕೊಡೆದಿದ್ದರೂ, ತರಗತಿ ಪ್ರಾರಂಭಕ್ಕೆ ಒಪ್ಪಿಗೆ ನೀಡದಿದ್ದರೂ, ಕೂಡಾ ರಸ್ತೆ, ಬೀದಿ, ದೈವ-ದೇವಾಲಯ, ಮನೆಯ ಚಾವಡಿ, ಜಗಲಿಗಳನ್ನು ಬಿಟ್ಟು ಶಾಲಾ ವಠಾರದಲ್ಲಿ ಶಿಕ್ಷಕ-ವಿದ್ಯಾರ್ಥಿಗಳು ಸಂಧಿಸಬಹುದಾದ ಯೋಗ್ಯ ಅವಕಾಶವನ್ನು ಶಿಕ್ಷಣ ಇಲಾಖೆ ಮಾಡಿಕೊಟ್ಟಿರುವುದು ಎಲ್ಲರಲ್ಲೂ ಸಂತಸವನ್ನು ಉಂಟುಮಾಡಿದೆ. ಆದರೂ ಕೂಡಾ ಯಾರೂ ಮೈಮರೆಯುವಂತಿಲ್ಲ. ಒಂದು ವೇಳೆ ಶಾಲಾ ವಠಾರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚು-ಕಡಿಮೆಯಾದರೂ ಕೂಡಾ ಶಿಕ್ಷಕರು, ಇಲಾಖೆ, ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಪ್ರಾರಂಭವಾಗುತ್ತದೆ. ಹೀಗಾಗಿ ಬಹಳ ಜಾಗರೂಕತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚು.

ಅದಕ್ಕಾಗಿ ಶಾಲಾವಠಾರಕ್ಕೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಗೊಳಿಸಬೇಕು. ಒಂದು ತರಗತಿಯಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದರೆ ಆ 30 ವಿದ್ಯಾರ್ಥಿಗಳನ್ನು 3 ಗುಂಪು ಮಾಡಿ ಹತ್ತು ವಿದ್ಯಾರ್ಥಿಗಳಂತೆ ವಾರಕ್ಕೆ ಎರಡು ಯಾ ಮೂರು ಬಾರಿ ಬರುವಂತೆ ನಿಗದಿಗೊಳಿಸಬಹುದು. ಅಂತೂ ಒಂದು ಹೊತ್ತಲ್ಲಿ ಎಂದರೆ ಬೆಳಗ್ಗಿನ ಒಂದು ಅವಧಿಯಲ್ಲಿ ಹತ್ತು ಮಂದಿ ಆಗಮಿಸಿದರೆ ಮಧ್ಯಾಹ್ನದ ಹೊತ್ತಲ್ಲಿ ಮತ್ತೆ ಉಳಿದವರಲ್ಲಿ ಹತ್ತು ಮಂದಿಗೆ ಅವಕಾಶವನ್ನು ನೀಡಬಹುದಾಗಿದೆ. ಈ ಪ್ರಕಾರ ಸರದಿಯಲ್ಲಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪಾಳಿಯ ಪ್ರಕಾರ ಶಿಕ್ಷಣ ದೊರಕುವಂತೆ ಮಾಡಬಹುದು.

ಇಂತಹ ಅವಕಾಶದ ಸಂದರ್ಭದಲ್ಲಿ ಕೂಡಾ ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧಾರಣೆ ಅನಿವಾರ್ಯಗೊಳಿಸಬೇಕು. ಅದೇ ರೀತಿ ಗುಂಪು ಸೇರಲು ಅವಕಾಶವನ್ನೂ ನೀಡದಂತಿರಬೇಕು. ಇದರಿಂದಾಗಿ ವಿದ್ಯಾರ್ಥಿಗಳು ಒಟ್ಟು ಸೇರುವಿಕೆ ತಡೆಯಲು ಸಾಧ್ಯವಾಗುತ್ತದೆ. ಈಗಿನಂತೆ ಬಿಸಿ ಊಟದ ಸಾಮಾಗ್ರಿಯನ್ನು ಪ್ರತೀ ವಿದ್ಯಾರ್ಥಿಗೂ ನೀಡುವುದನ್ನು ಮುಂದುವರೆಸಿದರೆ ಒಟ್ಟು ಸೇರುವಿಕೆಯನ್ನು ತಡೆದಂತೆಯೂ ಆಗುತ್ತದೆ. ಏಕೆಂದರೆ ಒಂದು ಹೊತ್ತಿನ ಶಿಕ್ಷಣದ ತರುವಾಯ ವಿದ್ಯಾರ್ಥಿ ಮನೆಗೆ ತೆರಳುವುದರಿಂದ ಶಾಲೆಯಲ್ಲಿ ಬಿಸಿ ಊಟದ ದರ್ದು ಇರಲಾರದು. ಅದೇ ರೀತಿ ಮಧ್ಯಾಹ್ನದ ವಿದ್ಯಾರ್ಥಿ ಊಟ ಮುಗಿಸಿಯೇ ಬರುವುದರಿಂದ ಆತನಿಗೂ ಅದರ ಅಗತ್ಯ ಇರದು.

ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಬಹಳ ಜಾಗರೂಕತೆಯಿಂದ ವಿದ್ಯಾರ್ಥಿಗಳನ್ನು ಸಂಭಾಳಿಸುವ ಅಗತ್ಯವಿರುತ್ತದೆ. ಹೆತ್ತವರಿಗೆ, ಪಾಲಕರಿಗೆ ಎಷ್ಟೇ ಭರವಸೆಯನ್ನು ನೀಡಿದರೂ ಕೂಡಾ ಎಲ್ಲರ ಮನಸ್ಸಿನಲ್ಲೂ ಅಧೈರ್ಯದ ಭಾವನೆ ಸದಾ ಇದ್ದೇ ಇರುತ್ತದೆ. ಹೀಗಿರುವಾಗ ಎಲ್ಲರ ಗಟ್ಟಿ ಧೈರ್ಯವೇ ಶಿಕ್ಷಣ ತರಗತಿಗಳ ತೆರೆಯುವಿಕೆಗೆ ಶ್ರೀರಕ್ಷೆ. ಶಿಕ್ಷಕರುಗಳು ಸಾರ್ವಜನಿಕ ಸಾರಿಗೆ ಕೊರತೆಯ ನಡುವೆಯೂ ಸ್ವತ: ಕೊರೊನಾದ ಸಂದರ್ಭದಲ್ಲಿ ಶಾಲೆಗೆ, ಮೌಲ್ಯಮಾಪನಕ್ಕೆ ಹಾಜರಾಗುತ್ತಾ, ವಿದ್ಯಾಗಮ, ಕೊರೊನಾದ ಲೆಕ್ಕಾಚಾರ ಇತ್ಯಾದಿ ಎಲ್ಲವನ್ನೂ ಮಾಡುತ್ತಿದ್ದರೂ ಕೂಡಾ ಕೊರೊನಾದ ಹೆದರಿಕೆಯಿಂದ ಅವರೂ ದೂರವಾಗಿಲ್ಲ.

ಕೊರೊನಾ ತಹಬಂದಿಗೆ ಬಂದ ತರುವಾಯ ತಿಂಗಳಿಗೆ ಒಂದು ದಿನ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳನ್ನು ಕೃಷಿ, ಕುಶಲ ಕಲೆಗಾರರು ಇತ್ಯಾದಿ ಸ್ಥಳೀಯ ನುರಿತವರ ಪರಿಸರಕ್ಕೆ ಕರೆದೊಯ್ದು ಸ್ವತ: ತಿಳುವಳಿಕೆÉ ಮೂಡಿಸುವ ಶಿಕ್ಷಣವನ್ನು ಕೈಗೊಳ್ಳಬಹುದು. ಸಾಧ್ಯತೆ ಇದ್ದಲ್ಲಿ ಪಾಠದಲ್ಲಿ ಬರುವ ಸಾಹಿತಿ/ ಕುಶಲ ಕಲೆಗಾರರು/ ಪ್ರತಿಭೆಗಳಲ್ಲಿ ಕರೆದೊಯ್ದು ಮಾಹಿತಿ ಒದಗಿಸುವುದರೊಂದಿಗೇ ಮಾಹಿತಿಯುಕ್ತ ಸ್ವಾಧ್ಯಾಯ ಕೃತಿ ಸಂಪುಟ ನೀಡುವಂತೆ ಮಾಡಿ ಆಂತರಿಕ ಮೌಲ್ಯಮಾಪನದ ಅಂಕ ನೀಡಲು ಮಾನದಂಡವಾಗಿಸಬಹುದು. ಇದು ವಿದ್ಯಾಥಿಗಳ ಯೋಗ್ಯತೆ ಒರೆಹಚ್ಚಲು ಹೆಚ್ಚು ಸಹಕಾರಿಯಾಗಲಿದೆ ಮಾತ್ರವಲ್ಲ ವಿದ್ಯಾರ್ಥಿಯ ಜ್ಞಾನಾಸಕ್ತಿಯ ಕ್ರಿಯೆಗೆ ಹೆಚ್ಚು ಪ್ರಾಧಾನ್ಯತೆ ದೊರಕಲಿದೆ. ಪ್ರಾಯೋಗಿಕ ಕಲಿಕೆಗೂ ಇದು ರಹದಾರಿ. ಸ್ಥಳೀಯ ನಿಷ್ಣಾತರ ದಾಖಲೀಕರಣವೂ ಇದರಿಂದ ಸಾಧ್ಯವಾಗಲಿದೆ.

ಈ ಪ್ರಕಾರ ಶಿಕ್ಷಣವು ನಿಂತ ನೀರಾಗದೆ ಸದಾ ಹರಿಯುವ ತೊರೆಯಂತೆ ಉತ್ತಮ, ನೂತನ ಸಾಧ್ಯತೆಗಳು ಇಲ್ಲಿ ಸದಾ ತುಂಬಿಕೊಂಡು ವಿದ್ಯಾರ್ಥಿಗಳ ಮನಸ್ಸಿನ ಬೆಳವಣಿಗೆಗೆ, ಜ್ಞಾನಾಭಿವೃದ್ಧಿಗೆ ಉತ್ತಮ ಬೆಳಕಾಗಲಿ. ಇಂತಹ ಪ್ರಯತ್ನದಿಂದಾಗಿ ನೂತನ ಶಿಕ್ಷಣದ ಹೊಸ ಶಕೆ ಶಿಕ್ಷಣದಲ್ಲಿ ಮೂಡಿಬರಲಿ, ಮಕ್ಕಳ ಮನಸ್ಸು ಪ್ರಫುಲ್ಲಿತಗೊಂಡು ಶಿಕ್ಷಣ ಸಾರ್ಥಕತೆ ಕಾಣಲಿ ಎಂದು ನಮ್ಮೆಲ್ಲರ ಹಾರೈಕೆ.

ಲೇಖನ : ರಾಯೀ ರಾಜ ಕುಮಾರ್, ಮೂಡುಬಿದಿರೆ (ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ರಾಜ್ಯಾದ್ಯಂತ 480ಕ್ಕೂ ಹೆಚ್ಚು ವಿವಿಧ ವಿಷಯದ ಕಾರ್ಯಾಗಾರಗಳನ್ನು ನಡೆಸಿದವರು.)




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here