Wednesday 24th, April 2024
canara news

ಸ್ವರ್ಗೀಯ ಜಯ ಸಿ.ಸುವರ್ಣ ಅವರಿಗೆ ಬಿಲ್ಲವ ಭವನದಲ್ಲಿ ಶ್ರದ್ಧಾಂಜಲಿ ಸಭೆ-ನಡಿನಮನ

Published On : 26 Oct 2020   |  Reported By : Rons Bantwal


ಜಯಣ್ಣ ಸಮಾಜಕ್ಕೆ ಸಹಾಯ ಆಗುವಷ್ಟು ನೀಡಿದ್ದಾರೆ : ಸಂಸದ ಗೋಪಾಲ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.25: ಜಯಸುವರ್ಣ ಅವರು ಓರ್ವ ವ್ಯಕ್ತಿಯಾಗಿರಲಿಲ್ಲ ಅವರು ಒಂದು ಸಂಸ್ಥೆ ಆಗಿದ್ದರು. ಅವರ ಜೀವನ ಚರಿತ್ರೆಯ ಕೃತಿ ರಚಿಸಿ ಭಾವೀ ಜನಾಂಗಕ್ಕೆ ಪ್ರೇರಣೆಯಾಗಬೇಕು. ಮಿತ ಭಾಷಿಯಾಗಿದ್ದರೂ ಅವಿರತ ಅಷ್ಟೇ ಶ್ರಮಜೀವಿ. ಸರ್ವ ಸಮಾಜದ ವಿಶ್ವಾಸ ಗಳಿಸಿದ ಶ್ರೇಷ್ಠ ಮಾನ್ಯ ಮತ್ತು ಸಂಧಾನಕರರಾಗಿದ್ದರು. ಭಾರತ್ ಬ್ಯಾಂಕ್‍ನ್ನು ದೂರದೃಷ್ಠಿ, ಶಿಸ್ತು, ಶ್ರದ್ಧೆಯಿಂದ ನಡೆಸಿ ಲಕ್ಷಂತರ ಜನರ ಬಾಳಿಗೆ ಶ್ರೀರಕ್ಷೆ ಆಗಿರುವುದೇ ಅವರ ದೊಡ್ದತನ. ಅದಕ್ಕಾಗಿಯೇ ದೇವರು ಅವರಿಗೆ ಹೆಚ್ಚುವರಿ ಶಕ್ತಿಯನ್ನೂ ದಯಪಾಲಿಸಿದ್ದರು. ದಕ್ಷ ಧುರೀಣರಾಗಿದ್ದು ಸಮಗ್ರ ಸಮಾಜದ ವಿಶ್ವಾಸಗಳಿಸಿದ ಸರ್ವಸ್ವತದ ಸರದಾರ. ಅಖಂಡ ಸಮಾಜಕ್ಕೆ ಸಹಾಯ ಆಗುವಷ್ಟು ಜಯಣ್ಣ ನೀಡಿ ಹೋಗಿದ್ದಾರೆ. ನಾವು ಬಹುಮಂದಿ ಒಂದಾಗಿ ಅವರ ಮಾದರಿಗಳನ್ನು ಮೈಗೂಡಿಸಿ ಒಂದು ಜಯಣ್ಣನಾಗಿ ತೋರ್ಪಡಿಸೋಣ. ಅವರ ದೂರದರ್ಶಿತ್ವದ ಸೇವೆ, ಬ್ಯಾಂಕ್, ಸಂಸ್ಥೆಗಳನ್ನು ಅವರ ನಿಷೆಯಂತೆ ಮುನ್ನಡೆಸಿದರೇ ಅದೇ ಅವರಿಗೆ ಸಲ್ಲುವ ನಿಜಾರ್ಥದ ಶ್ರದ್ಧಾಂಜಲಿ ಎಂದು ಬೊರಿವಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.

ಇತ್ತೀಚೆಗೆ ಸ್ವರ್ಗಸ್ಥರಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಜೀವ ಗೌರವಾಧ್ಯಕ್ಷ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಸರ್ವಾಂಗೀಣ ಸರದಾರ, ಮಾಜಿ ಕಾರ್ಯಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ.ಸುವರ್ಣ ಅವರಿಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ ಶನಿವಾರ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿನ ಗುರುನಾರಾಯಣ ಸಭಾಗೃಹದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದು ಸಭೆಯಲ್ಲಿ ನುಡಿ-ನಮನಗೈದು ಸಂಸದ ಶೆಟ್ಟಿ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭೆಯಲ್ಲಿ ಕರ್ನಾಟಕ ಸರಕಾರದ ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆ ಮಂತ್ರಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ಕೆ.ಸಿ ನಾರಾಯಣ ಗೌಡ ಮತ್ತು ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್ ಅವರು ಜಯ ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ನಮಿಸಿ ದೀಪಹಚ್ಚಿ ಸಭೆಗೆ ಚಾಲನೆಯನ್ನಿತ್ತರು.

ಸಚಿವ ನಾರಾಯಣ ಗೌಡ ಮಾತನಾಡಿ ಒಳನಾಡು ಮತ್ತು ಹೊರನಾಡಿನಲ್ಲಿನ ಯಾವುದೇ ಸಮಾಜದವರಿಗೆ ಏನೂ ಕಷ್ಟ ಬಂದರೂ ಜಯಣ್ಣ ಇದ್ದಾರೆ ಎನ್ನುವ ಮನೋಬಲ ಇತ್ತು. ಅದರಂತೆ ಸಮಾಜದವರು ತಮ್ಮ ಒಳ್ಳೆಯ ಕೆಲಸ, ಯೋಜನೆಗಳನ್ನು ಸುವರ್ಣರ ಆಶೀರ್ವಾದ ಪಡೆದು ಮಾಡುತ್ತಿದ್ದರೆ ಅದು ಯಾವಗಲೂ ಸಫಲತೆ ಕಾಣುತ್ತಿತ್ತು. ಕಾರಣ ಜಯಣ್ಣರು ಅಂತಹ ಭಗವಂತನ ಭಕ್ತರಾಗಿದ್ದರು. ಸಂಸ್ಕೃತಿ,ಸಂಸ್ಕಾರ, ಪೂಜೆ, ಪುರಸ್ಕಾರಗಳಿಗೆ ಯಾರು ಸಣ್ಣವರು ಕರೆದರೂ ಹಾಜರಾಗುವ ಅಭ್ಯಾಸ ಅವರದ್ದು. ಅವರನ್ನು ಕಳೆದುಕೊಳ್ಳುವುದು ಎಂದೆಂದೂ ಮರೆಯಲಾಗದ ನಷ್ಟವಾಗಿದೆ. ಅವರ ಧರ್ಮಪತ್ನಿ ಲೀಲಾಕ್ಕ ನನ್ನ ತಾಯಿ ಸಮಾನ. ಅಂತಹ ತಾಯಿ ಮತ್ತು ಪರಿವಾರಕ್ಕೆ ಅಗಲಿಕೆಯನ್ನು ತುಂಬುವ ಶಕ್ತಿ ಭಗವಂತನು ಕರುಣಿಸಲಿ. ಜಯ ಸುವರ್ಣರು ಪರೋಕ್ಷವಾದರೂ ನಮ್ಮೊಂದಿಗೆ ಸದಾ ಇರುತ್ತಾರೆ. ಹೊರನಾಡ ತುಳು ಕನ್ನಡಿಗರಿಗೆ ಜಯಣ್ಣರ ಆಶೀರ್ವಾದವೇ ಶಕ್ತಿ ತುಂಬುವಂತಾಗಬೇಕು ಎಂದರು.

ಸೇವೆಯ ಮೂಲಕ ಶಾಶ್ವತವಾಗಿ ನೆನಪಿಡುವ ಜಯಣ್ಣ ಇವತ್ತು ನಮ್ಮೊಡನೆ ಇಲ್ಲ ಅನ್ನುವ ಕಲ್ಪನೆ ಮಾಡಲಾಗುವುದಿಲ್ಲ. ಎಲ್ಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಶ್ರೇಷ್ಠ ಸಮಾಜ ಸೇವಕ, ಬಿಲ್ಲವ ಸಾಧಕ. ಎಲ್ಲಾ ಸಮಾಜಕ್ಕೆ ಇವರ ಬಹಳ ದೊಡ್ಡ ಕೊಡುಗೆಯಿದೆ. ಇಂತಹ ಜಯಣ್ಣ ಕೇವಲ ಬಿಲ್ಲವರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಸಮಾಜದ ಶಕ್ತಿಯಾಗಿದ್ದರು. ಅವರೋರ್ವ ತಪಸ್ವೀ ಆಗಿದ್ದು, ಅವರ ಚಿಂತನಾ, ವಿಸ್ತಾರನೆಯೇ ಅವರಿಗೆ ನೀಡುವ ಶ್ರದ್ಧಾಂಜಲಿ ಎಂದು ಶಾಸಕ ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟರು.

ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮಾತನಾಡಿ ಜಯ ಸುವರ್ಣರು ಇನ್ನಿಲ್ಲ ಎಂಬುದನ್ನು ಊಹಿಸಲೂ ಕಷ್ಟವಗುತ್ತಿದೆ. ದಂತಕಥೆ ಎಣಿಸಿದ ಇಂತಹ ಜಯಣ್ಣ ನಮ್ಮ ಪಾಲಿಗೆ ಮತ್ತೊಮ್ಮೆ ಸಿಗಲಾರರು. ಅವರೋರ್ವ ನಾರಾಯಣ ಗುರುಗಳಂತೆಯೇ ಸಮಾಜ ಉದ್ಧಾರಕರು. ಅವರ ನಾನಾ ವ್ಯಕ್ತಿತ್ವ, ವಿವಿಧ ಸೇವೆಗಳನ್ನು ಮುನ್ನಡೆಸಿದಲ್ಲಿ ಮಾತ್ರ ನಾವು ಜಯ ಸುವರ್ಣರಿಗೆ ಕೊಡುವ ನಿಜಾರ್ಥದ ಬಾಷ್ಪಾಂಜಲಿ ಆಗಲಿದೆ ಎಂದು ಬಿಲ್ಲವರ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.

ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡಿ ಎಲ್ಲ ಸಮಾಜವನ್ನು ಪ್ರೀತಿಸಿದ ಜನನಾಯಕ ಜಯ ಸುವರ್ಣರು. ಆಗಾಧವಾದ ಸಹನೆ, ತಾಳ್ಮೆ ಅವರಿಂದ ಕಲಿಯಬೇಕು. ಅವರ ಆದರ್ಶ ಮೈಗೂಡಿಸಿ ಜೀವನ ನಡೆಸುವುದೇ ಅವರಿಗೆ ಸಲ್ಲುವ ಅಶ್ರುತಾರ್ಪಣ. ನಮ್ಮ ನಂಬಿಕೆಯಂತೆ ಅವರು ಸದಾ ನಮ್ಮಲ್ಲಿರಾದರು.

ಜಯ ಸುವರ್ಣರ ಅರಮಾಪ್ತರರಾಗಿದ್ದ ಮಾಜಿ ಕೇಂದ್ರ ಸಚಿವ ಬಿಲ್ಲವ ಧುರೀಣ ಬಿ.ಜನಾರ್ಧನ ಪೂಜಾರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಇವರು ಕಳುಹಿಸಿದ್ದ ವಾಯ್ಸ್ ಮೇಸೆಜ್‍ನ್ನು ಮಧ್ಯಾಂತರದಲ್ಲಿ ಭಿತ್ತರಿಸಲಾಯಿತು.

ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಕೋಟ್ಯಾನ್, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ, ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ್ ಡಿ.ಪೂಜಾರಿ, ದಯಾನಂದ ಆರ್.ಪೂಜಾರಿ, ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ, ಬಿಸಿಸಿಐ ಕಾರ್ಯಧ್ಯಕ್ಷ ಎನ್.ಟಿ ಪೂಜಾರಿ, ವಾಮನ ಹೊಳ್ಳಾ, ಹಿರಿಯಡ್ಕ ಮೋಹನ್‍ದಾಸ್, ಎನ್.ಎಂ ಸನೀಲ್, ಸದಾಶಿವ ಎ.ಕರ್ಕೇರಾ, ನ್ಯಾಯವಾದಿ ಶಶಿಧರ ಕಾಪು, ಜಯಕೃಷ್ಣ ಎ.ಶೆಟ್ಟಿ, ಕೆ.ಎಲ್ ಬಂಗೇರ, ಶ್ರೀನಿವಾಸ್ ಆರ್.ಸಾಫಲ್ಯ, ಅಶೋಕ ಎಸ್.ಸುವರ್ಣ, ಡಿ.ಕೆ ಶೆಟ್ಟಿ, ನ್ಯಾ| ಬಿ.ಸುಭಾಷ್ ಶೆಟ್ಟಿ, ಬಾಬು ಬೆಲ್ಚಡ ಮುಂತಾದವರು ಮಾತನಾಡಿ ಅಗಲಿದ ದಿವ್ಯಾತ್ಮಕ್ಕೆ ಸಂತಾಪ ವ್ಯಕ್ತಪಡಿಸಿ ನುಡಿನಮನಗೈದರು.

ವೇದಿಕೆಯಲ್ಲಿ ರಂಗಪ್ಪ ಸಿ.ಗೌಡ, ಜಿತೇಂದ್ರ ಗೌಡ, ರಾಜೇ ಗೌಡ, ಜಯ ಸುವರ್ಣರ ಸುಪುತ್ರರಾದ ಸೂರ್ಯಕಾಂತ್ ಜೆ.ಸುವರ್ಣ, ಸುಭಾಶ್ ಜೆ.ಸುವರ್ಣ, ದಿನೇಶ್ ಜೆ.ಸುವರ್ಣ, ಯೋಗೇಶ್ ಜೆ.ಸುವರ್ಣ, ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ರವೀಂದ್ರ ಎ.ಶಾಂತಿ, ಭಾಸ್ಕರ ಎಂ.ಸಾಲ್ಯಾನ್, ಗಂಗಾಧರ ಜೆ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅಮೀನ್, ಶ್ರೀನಿವಾಸ ಆರ್.ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಜಯಂತಿ ವಿ.ಉಳ್ಳಾಲ್, ಯುವಭ್ಯುದಯ ಸಮಿತಿಯ ನಾಗೇಶ್ ಎಂ. ಕೋಟ್ಯಾನ್, ಕೆ.ಭೋಜರಾಜ್, ಎನ್‍ಸಿಪಿ ನಾಯಕ ಲಕ್ಷ್ಮಣ ಪೂಜಾರಿ, ಜಗನ್ನಾಥ ವಿ.ಕೋಟ್ಯಾನ್, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಭಾರತ್ ಬ್ಯಾಂಕ್‍ನ ನಿರ್ದೇಶಕರು, ಉನ್ನತಾಧಿಕಾರಿಗಳು, ಸುವರ್ಣರ ಅವರ ಹಿತೈಷಿಗಳು, ಬಂಧು ಮಿತ್ರರು, ನೂರಾರು ಗಣ್ಯರು, ಬಿಲ್ಲವರ ಅಸೋಸಿಯೇಶನ್‍ನ ಕೇಂದ್ರ ಕಛೇರಿ ಮತ್ತು ಸ್ಥಳೀಯ ಕಛೇರಿಯ ಇನ್ನಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಪುಷ್ಪವೃಷ್ಠಿಗೈದು ಸಂತಾಪ ಸೂಚಿಸಿದರು. ಹರೀಶ್ ಹೆಜ್ಮಾಡಿ ಸಭೆ ನಿರೂಪಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here