Friday 19th, April 2024
canara news

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2020 ಪ್ರಕಟ

Published On : 29 Oct 2020   |  Reported By : Rons Bantwal


ಮಾಹುಲಿ ವಿದ್ವಾನ್ ವಿದ್ಯಾಸಿಂಹಾಚಾರ್ಯ ಆಯ್ಕೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.28: ಕರ್ನಾಟಕ ರಾಜ್ಯ ಸರಕಾರವು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮುಂಬಯಿ ಉಪನಗರದ ಮುಲುಂಡ್ ಇಲ್ಲಿನ ಸತ್ಯಧ್ಯಾನ ವಿದ್ಯಾಪೀಠ ಇದರ ಕುಲಪತಿ ಮಾಹುಲಿ ವಿದ್ವಾನ್ ವಿದ್ಯಾಸಿಂಹಾಚಾರ್ಯ ಇವರಿಗೆ ಹೊರನಾಡ ಶ್ರೇಷ್ಠ ಸಮಾಜ ಸೇವಕರಾಗಿ 2020ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಳಿಸಿದ್ದಾರೆ.

ಮಾಧ್ವ ಸಿದ್ದಾಂತದ ಪ್ರಚಾರಕ್ಕಾಗಿ 1937ರಲ್ಲಿ ಉಪನಗರ ಮುಂಬಯಿ ಇಲ್ಲಿನ ಮುಲುಂಡ್‍ನಲ್ಲಿ ಸ್ಥಾಪಗೊಂಡ ಸತ್ಯಧ್ಯಾನ ವಿದ್ಯಾ ಪೀಠ ತನ್ನ ಗುರುಕುಲ ಪದ್ಧತಿಯ ಪ್ರಕಾರ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾಥಿರ್üಗಳಿಗೆ ವೇದ, ಶಾಸ್ತ್ರ, ಜ್ಯೋತಿಷ್ಯ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತಗಳ ಸಿದ್ಧಾಂತವನ್ನು ಕಲಿಸುವ ಪಾಠ ಶಾಲೆಯಾಗಿ ಪ್ರಸಿದ್ಧಿ ಪಡೆದಿದೆ. ಹನ್ನೆರಡು ವರ್ಷಗಳ ಕಾಲ ತಮ್ಮ ಮುಖ್ಯ ಕುಲಪತಿಗಳಿಂದ ವಿದ್ಯಾಥಿರ್üಗಳಿಗೆ ವೇದ, ಸಾಹಿತ್ಯ, ವ್ಯಾಕರಣ ಯೋಗ, ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣತಿಯನ್ನಿತ್ತು ನಂತರ ಅವರಿಗೆ ಸುಧಾ ವಿದ್ವಾನ್ ಎಂಬ ಪದವಿಯನ್ನು ಕೊಡುತ್ತಾರೆ. ಪ್ರಸ್ತುತ ವಿದ್ಯಾಸಿಂಹ ಆಚಾರ್ಯ ಮಾಹುಲಿ ಅವರು ಮುಲುಂಡ್ ಶಾಖೆಯ ಕುಲಪತಿ ಆಗಿರುವರು.

ಬೆಳಗಾಂ ಜಿಲ್ಲೆಯ ಅಥಣಿ ಇಲ್ಲಿನ ಐನಾಪುರ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾವತೀದೇವಿ ದಂಪತಿ ಸುಪುತ್ರರಾಗಿ 1960ರಲ್ಲಿ ಜನಿಸಿದ ವಿದ್ಯಾಸಿಂಹಾಚಾರ್ಯರು ತನ್ನ 19 ವರ್ಷದಲ್ಲಿ ಶ್ರೀಮನ್ನ್ಯಾಯ ಸುಧಾ ಪರೀಕ್ಷೆ ನೀಡಿದ್ದರು. ವಿದ್ಯಾಸಿಂಹಾಚಾರ್ಯರು ನ್ಯಾಯ,ವೇದಾಂತ,ವ್ಯಾಕರಣ, ಸಾಹಿತ್ಯ, ಮೀಮಾಂಸಾ ಮೊದಲಾದ ಅನೇಕಶಾಸ್ತ್ರಗಳ ವೈದುಷ್ಯವನ್ನು ಹೊಂದಿರುವುದು ಮಾತ್ರವಲ್ಲದೆ, ಪೌರಾತ್ಯ,ಪಾಶ್ಚಾತ್ಯ ತತ್ತ್ವಜ್ಞಾನಗಳ ಆಳವಾದ ಅಧ್ಯಯನ ಮಾಡಿದವರು. ವಿದ್ಯಾಪೀಠದಲ್ಲಿರುವ ಸಹಸ್ರಸಹಸ್ರಸಂಖ್ಯೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದ ಗ್ರಂಥಭಂಡಾರ ಆಚಾರ್ಯರ ವಿದ್ಯಾಪ್ರೇಮಕ್ಕೆ ಸಾಕ್ಷಿಯಾಗಿದೆ. ಚಿಕ್ಕ ಹರಯದಲ್ಲಿಯೇ, ಕುಲಪತಿ ಆಗಿ ವಾಣೀವಿಹಾರ ವಿದ್ಯಾಲಯ ಹಾಗೂ ಶ್ರೀಸತ್ಯಧ್ಯಾನ ವಿದ್ಯಾಪೀಠಗಳನ್ನು ನಡೆಸುವ ಮಹತ್ತರವಾದ ಹೊಣೆಗಾರಿಕೆ ಹೊತ್ತ ವಿದ್ಯಾಸಿಂಹಾಚಾರ್ಯರು ಶ್ರೀಹರಿ, ವಾಯುಗಳ ಅನುಗ್ರಹದಿಂದ ಅತ್ಯಂತ ಯಶಸ್ವಿಯಾಗಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ.

ಶ್ರೀವಿಷ್ಣುತೀರ್ಥರ ಅಧ್ಯಾತ್ಮ ರಸರಂಜನಿಯನ್ನು ಕನ್ನಡಕ್ಕೆ ಅನುವಾದಿಸಿರುವ ಆಚಾರ್ಯರು ಸುಧಾವಿಶಾರದ, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರಿಂದ ಶ್ರೀಪೂರ್ಣಪ್ರಜ್ಞಪ್ರಶಸ್ತಿ ಹಾಗೂ ಕವಿಕುಲಗುರು ಕಾಳಿದಾಸ ವಿಶ್ವವಿದ್ಯಾನಿಲಯದಿಂದ ಮಹಾಮಹೋಪಾಧ್ಯಾಯ ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಧ್ಯಯನ,ಅಧ್ಯಾಪನ, ಜ್ಞಾನ ಪ್ರಸಾರವನ್ನೇ ಜೀವನದ ಪರಮ ಮುಖ್ಯವ್ರತವಾಗಿರಿಸಿ ಕೊಂಡಿರುವ ಋಷಿಸದೃಶ ಆಚಾರ್ಯರು ಧರ್ಮಪತ್ನಿ ಪ್ರಜ್ಞಾದೇವಿ, ಸುಪುತ್ರ ವಿಶ್ವಪ್ರಜ್ಞಾಚಾರ್ಯ ಮತ್ತು ಸುಪುತ್ರಿ ಗೌರಿ ವಿದ್ಯಾಧೀಶ ಅವರೊಂದಿಗಿನ ಚಿಕ್ಕ ಸಂಸಾರವಾಗಿದ್ದು ಸದ್ಯ ಮುಲುಂಡ್‍ನಲ್ಲಿ ನೆಲೆಯಾಗಿದ್ದಾರೆ.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮುಂಬಯಿ, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಪದಾಧಿಕಾರಿಗಳು, ಉದ್ಯಮಿ ಬಿ.ಆರ್ ರಾವ್ (ಬಡ ನಿಡಿಯೂರು ಉಡುಪಿ), ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳು, ಮತ್ತಿತರ ಗಣ್ಯರು ವಿದ್ವಾನ್ ವಿದ್ಯಾಸಿಂಹಾಚಾರ್ಯ ಇವರಿಗೆ ಅಭಿನಂದಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here