ಮೂಡುಬಿದಿರೆ (ಆರ್‍ಬಿಐ), ಎ.15: ಭೃಷ್ಟಾಚಾರ ವಿರುದ್ಧ ಹೋರಾಟದ ಮುಂಚೂಣಿಯಲ್ಲಿ ಇರುವ ಕರಾವಳಿ ಕರ್ನಾಟಕದ ಪತ್ರಕರ್ತ ಜೈಸನ್ ತಾಕೊಡೆ ಅವರನ್ನು ಮಂಗಳೂರು ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕ್ರಿಮಿನಲ್ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಶೀನ ನಾಯ್ಕ ಬಿ. ಅವರು 2017ರ ಸೆ.20ರಂದು ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ, ಕೊಲೆ ಬೆದರಿಕೆ ಎಂದೇಳಿ ಪತ್ರಕರ್ತ ಜೈಸನ್ ಮೇಲೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್ ಪಲ್ಲವಿ ಅವರು ಜೈಸನ್ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿ ಅವರನ್ನು ಪ್ರತಿವಾದಿಯನ್ನಾಗಿಸಿ ಜೈಸನ್ ಆವರು ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ್ದು, ಮುಖ್ಯಾಧಿಕಾರಿ ಅವರ ವಿರುದ್ಧ ಆದೇಶವಿರುವುದನ್ನು ಮುಖ್ಯಾಧಿಕಾರಿಯವರೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು. ಟೈಮ್ಸ್ ಆಫ್ ಬೆದ್ರ ಪತ್ರಿಕೆಯ ಸಂಪಾದಕರಾಗಿರುವ ಜೈಸನ್ ತಾಕೊಡೆ ಅವರು ಮೂಡುಬಿದಿರೆ ಪುರಸಭೆಯಲ್ಲಿನ ಭೃಷ್ಟಾಚಾರದ ಬಗ್ಗೆ ವರದಿಗಳನ್ನು ಪ್ರಕಟಿಸುತ್ತಿದ್ದರು ಎಂದೂ ಸಾಕ್ಷಿದಾರರು ಹೇಳಿಕೆ ನೀಡಿದ್ದರು.
ಪತ್ರಕರ್ತ ಜೈಸನ್ ತಾಕೊಡೆ ವಿರುದ್ಧ ಪ್ರತೀಕಾರ ಸಾಧಿಸುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಸೃಷ್ಟಿಗೊಳಿಸಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯವು, ಎಲ್ಲಾ ಸಾಕ್ಷಿಗಳು ಫಿರ್ಯಾದಿದಾರರ ಅಡಿಯಲ್ಲಿ ಕೆಲಸ ಮಾಡುವ ನೌಕರರೇ ಆಗಿದ್ದು ಸಾರ್ವಜನಿಕವಾದÀ ಯಾವುದೇ ಸಾಕ್ಷಿಗಳು ಇಲ್ಲದೆ ಇರುವುದನ್ನು ಕೂಡಾ ಗಮನಕ್ಕೆ ತೆಗೆದುಕೊಂಡಿತ್ತು. ಪ್ರಾಸಿಕ್ಯೂಶನ್ ಸಮರ್ಪಕ ಸಾಕ್ಷಿಗಳನ್ನು ನೀಡಿ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪತ್ರಕರ್ತ ಜೈಸನ್ ಅವರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ಜೈಸನ್ ತಾಕೊಡೆ ಪರ ನ್ಯಾಯವಾದಿಗಳಾದ ಪಿ.ಪಿ ಹೆಗ್ಡೆ, ರಾಜೇಶ್ ಶೆಟ್ಟಿ, ಮೋಹಿನಿ, ಗಿರೀಶ್ ಅವರು ವಾದಿಸಿದ್ದರು.
ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ ಪತ್ರಕರ್ತ ಜೈಸನ್ ತಾಕೊಡೆ ಅವರು ಪ್ರಕರಣ ದಾಖಲಿಸಿ ಹೋರಾಟದ ಮನೋಭಾವನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿತ್ತು. ಆದರೆ ಸತ್ಯಕ್ಕೆ ಸಾವಿಲ್ಲ ಎನ್ನುವುದನ್ನು ನ್ಯಾಯಾಲಯ ನಿರೂಪಿಸಿದೆ. ಈ ಪ್ರಕರಣದಲ್ಲಿನ ಜಯ ಭೃಷ್ಟಾಚಾರದ ವಿರುದ್ಧ ಹೆಚ್ಚಿನ ಹೋರಾಟ ಮಾಡುವ ಸ್ಥೈರ್ಯ ತುಂಬಿದೆ ಎಂದರು.
ಮೂಡುಬಿದಿರೆ ಠಾಣಾಧಿಕಾರಿ ರಾಮಚಂದ್ರ ನಾಯಕ್ ಅವರು ಐಪಿಸಿ ಸೆಕ್ಷನ್ 353, 448, 504, 506 ಮತ್ತು 1989ರ ಎಸ್‍ಸಿ/ ಎಸ್‍ಟಿ ದೌರ್ಜನ್ಯ ತಡೆ ಅಡಿ ಎಫ್‍ಐಆರ್ ದಾಖಲಿಸಿದ್ದರು. ಪಣಂಬೂರು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ರಾಜೇಂದ್ರ ಡಿಎಸ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಚಾರ್ಜ್‍ಶೀಟ್ ಸಲ್ಲಿಸಿದ್ದರು. ನ್ಯಾಯಾಲಯವು ಪ್ರಾಸಿಕ್ಯೂಶನ್ ಪರ 12 ಸಾಕ್ಷಿಗಳನ್ನು ಪರಿಶೀಲಿಸಿ ಹೇಳಿಕೆ ದಾಖಲಿಸಿಕೊಂಡಿತ್ತು.