Thursday 28th, March 2024
canara news

ಖಾವಿ-ಖಾಕಿ-ಖಾದಿ ಧರಿಸದೇ ಜನನಾಯಕನಾಗಿ ಜನಮಾನಸದಿ ಉಳಿದ ಜಯಣ್ಣ

Published On : 16 May 2021   |  Reported By : Rons Bantwal


ಎಪ್ಪತ್ತೈದರ ಸಂಭ್ರಮಕ್ಕೆ ಪ್ರತ್ಯಕ್ಷವಾಗಿಲ್ಲದ ಸಾವಿಲ್ಲದ ಸರದಾರ ಜಯ ಸಿ.ಸುವರ್ಣ
(ಚಿತ್ರ / ಬರಹ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.15: ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ, ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಭಾರತ್ ಬ್ಯಾಂಕ್, ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ನಂದನ ಬಿತ್ತ್‍ಲ್, ಲಲಿತಾ ಆರ್.ಚಾರೀಟೇಬಲ್ ಟ್ರಸ್ಟ್ ಮೂಲ್ಕಿ, ಗುರು ನಾರಾಯಣ ಇಂಗ್ಲೀಷ್ ವಿೂಡಿಯಂ ಸ್ಕೂಲ್ ಮೂಲ್ಕಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವಂತೆಯೇ ಕಳೆದ ವರ್ಷ (21.10.2020) ಸ್ವರ್ಗೀಯರಾದ ಜಯ ಸಿ.ಸುವರ್ಣ ಬದುಕುಳಿದಿದ್ದರೆ ಇಂದಿಗೆ (ಮೇ.15) ಎಪ್ಪತ್ತೈದರ ಸಂಭ್ರಮ.... ಹುಟ್ಟುಹಬ್ಬದ ವಜ್ರೋತ್ಸವ.

ಸದ್ಯ ಸುವರ್ಣರು ಪ್ರತ್ಯಕ್ಷವಾಗಿಲ್ಲದಿದ್ದರೂ ಇಂದಿಗೂ ಜನಮಾನಸದಲ್ಲಿ ದಂತಕಥೆಯಾಗಿ ಸಾವಿಲ್ಲದ ಸರದಾರ ಜಯ ಸುವರ್ಣ ಆಗಿರುವುದು ಅವರು ಸಲ್ಲಿಸಿದ ಅನುಪಮ ಸೇವೆಗೆ ಸಾಕ್ಷಿ. ಈ ಸಂಭ್ರಮಕ್ಕಾಗಿ ತೆರೆಮರೆಯಲ್ಲೇ ಬಹಳಷ್ಟು ಸಿದ್ಧತೆಗಳು ನಡೆದಿದ್ದರೂ ಇಂದು ಸುವರ್ಣರ ವಜ್ರೋತ್ಸವದ ಜನುಮದಿನ. ಆದರೆ ಅವರ ಅನುಪಸ್ಥಿತಿಯಿಂದಲೇ ಇದರ ಆಚರಣೆ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಆದರೂ ಅವರ ಆಪ್ತರು, ಹಿತೈಷಿಗಳು ಆಗಸದತ್ತ ಮುಖಮಾಡಿ ಸ್ವರ್ಗದಲ್ಲಿ ಮೆರೆಯುತ್ತಿರುವ ಜಯಣ್ಣನಿಗೆ ಶ್ರದ್ಧಾಂಜಲಿ, ಸದ್ಗತಿ ಕೋರಿ ಜನ್ಮದಿನದ ಶುಭಾಶಯ ಸಲ್ಲಿಸುವುದು ಅನಿವಾರ್ಯ.

ಚಂದು ಪೂಜಾರಿ ಮತ್ತು ಅಚ್ಚು ಪೂಜಾರ್ತಿ ದಂಪತಿ ಸುಪುತ್ರರಾಗಿ ಉಡುಪಿ ಪಡುಬಿದ್ರಿ ಸಮೀಪದ ಅಡ್ವೆ ಇಲ್ಲಿ (15.05.1946) ಸ್ವಾತಂತ್ರೊ ್ಯೀತ್ತರದಲ್ಲಿ ಜನಿಸಿದ್ದ ಜಯಣ್ಣ ಪ್ರಾಥಮಿಕ ಶಿಕ್ಷಣ ಅಡ್ವೆಯಲ್ಲಿ ಮತ್ತು ಉನ್ನತ ಶಿಕ್ಷಣವನ್ನು ಮುಂಬಯಿ ಅಂಧೇರಿ ಪೂರ್ವದ ಚಿನ್ನಾಯ್ ಕಾಲೇಜ್‍ನಲ್ಲಿ ಪೂರೈಸಿದ್ದರು. ತಮ್ಮ ಜೀವನ ನಿರ್ವಹಣಾ ಕೌಶಲ್ಯ ತೀಕ್ಷ್ಣಗೊಳಿಸಲು 1974ರಲ್ಲಿ ಉದ್ಯಮ ಕ್ಷೇತ್ರÀಕ್ಕೆ ಕಾಲಿರಿಸಿ ಗೋರೆಗಾಂವ್‍ನ ಜಯಪ್ರಕಾಶ್ ಹೊಟೇಲು ತನ್ನದಾಗಿಸಿ ಪ್ರತಿಷ್ಠಿತ ಹೊಟೇಲು ಉದ್ಯಮಿಯಾಗಿ ಮುನ್ನಡೆದರು. ಜೊತೆಗೆ ತನ್ನೊಂದಿಗೆ ಇತರರನ್ನೂ ಬೆಳೆಸಿದ ಸುವರ್ಣರ ಜೀವನಶೈಲಿಯು ಅವರನ್ನು ಇವೊತ್ತೂ ಜೀವಂತವಾಗಿರಿಸಲು ಕಾರಣ. ಇಂದು ಪಾನ್‍ಬೀಡಾ ಅಂಗಡಿಯಿಂದ ಹಿಡಿದು ಅದೆಷ್ಟೋ ಉದ್ಯಮಿಗಳು, ಹೊಟೇಲಿಗರೂ ಕೊರೋನಾ ನಿಮಿತ್ತ ತಮ್ಮ ಉದ್ಯಮಸ್ಥಾನ, ಮಠಮಂದಿರಗಳಿಗೆ ಹೋಗಲಾಗದೆ ಇದ್ದರೂ ಮನೆಕಿಟಿಯಿಂದಲೇ ಸೂರ್ಯನತ್ತ ಚಿತ್ತವನ್ನರಿಸಿ ಅಗಲಿದ ಶತಮಾನದ ಶ್ರೇಷ್ಠ ಸಮಾಜಸೇವಕ ಜಯ ಸುವರ್ಣ ಅವರನ್ನು ನೆನಪಿಸುತ್ತಾ ಜೈ ಜಯಣ್ಣ ಅಂದರಂತೆ.

ಬಾಲ್ಯದಿಂದಲೂ ಮುಖಂಡನಾಗಿ ಕೆಲಸ ಮಾಡಲು ಇಷ್ಟಪಡುತ್ತಿದ್ದ ಜಯಣ್ಣ ವಿದ್ಯಾಥಿರ್üದೆಸೆಯಲ್ಲೇ ನಾಯಕ ಎಂದೆಣಿಸಿದವರು. ಆದರೆ ಜೀವನ್ನುದ್ದಕ್ಕೂ ಎಂದೂ ಖಾವಿ, ಖಾಕಿ ಅಥವಾ ಖಾದಿ ಧರಿಸುವ ಪ್ರಯತ್ನ ಮಾಡದೆ ತೆರೆಮರೆಯಲ್ಲಿದ್ದೇ ಜನನಾಯಕನಾಗಿ ಮೆರೆದರು. ಪರಿಶ್ರಮಕ್ಕೆ ಎಂದೂ ಹಿಂಜರಿಯದ ಉತ್ಸಾಹ ಮೈಗೂಡಿಸಿ ಎಲ್ಲಾ ಸಮಯದಲ್ಲೂ ಎಲ್ಲಾ ಸಮಾಜದವರಲ್ಲೂ ಸಾಮರಸ್ಯದ ಬಾಂಧವ್ಯವನ್ನಿರಿಸುತ್ತಾ ಅನುಕೂಲಸ್ಥರನ್ನು ಕರೆಸಿ ಗೌರವಿಸಿ, ಸಮಾಜ ಬಾಂಧವರನ್ನು ಒಗ್ಗೂಡಿಸುತ್ತಾ `ಬಿಲ್ಲವ ಭೀಷ್ಮ' ಎಂದೇ ನಾಮಾಂಕಿತರಾದರು. ಜೊತೆಜೊತೆಗೆ ಮುಂಬಯಿ ಭುವನದಲ್ಲೊಂದು `ಬಿಲ್ಲವ ಭವನ' ಕಟ್ಟಿಕೊಂಡರು. ಜೊತೆಗೆ ತನ್ನ ಚಾಣಕ್ಷತನದಿಂದ ಜಾತ್ಯಾತೀತ ಧುರೀಣರು, ರಾಜಕಾರಣಿಗಳು, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಸ್ವಜಾತೀಯರನ್ನೂ ಒಗ್ಗೂಡಿಸುತ್ತಾ ಎಲ್ಲರನ್ನೂ ಕೇಂದ್ರಸ್ಥಾನ ಬಿಲ್ಲವರ ಭವನಕ್ಕೆ ಆಹ್ವಾನಿಸಿ ಸನ್ಮಾನಿಸಿ ಸ್ವಸಮಾಜ ಮತ್ತು ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿ ವ್ (ಮುಂಬಯಿ) ಲಿಮಿಟೆಡ್ ಪಥಸಂಸ್ಥೆಯನ್ನೂ ಜಾಗತಿಕವಾಗಿ ಪರಿಚಯಿಸಿದರು.
ತನ್ನ ಒಡನಾಟದಲ್ಲಿದ್ದ ಎಲ್ಲರನ್ನೂ ಸದಾ ನೆನೆಯುತ್ತಿದ್ದ ಸುವರ್ಣರು ತನ್ನ ಬಾಲ್ಯದ ಕಾಲಾವಸ್ಥೆಯನ್ನು ಮೆಲುಕು ಹಾಕುತ್ತಾ ಭಾವೀ ಜನಾಂಗಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಎಂದೂ ತಮ್ಮ ಸಂಸೃತಿ, ಸ್ವಂತಿಕೆಗಳನ್ನು ಬಿಟ್ಟುಕೊಡುತ್ತಿರುವುದಕ್ಕೆ ಅಧ್ವಾನವಾಗಿ ಬಳಸುವುದಕ್ಕೆ ಯಜಣ್ಣ ಇಷ್ಟ ಪಡದೆ ಮಾತೃಭಾಷೆ ತುಳು, ಕನ್ನಡದ ಅಭಿಮಾನಿಯಾಗಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಾ, ನಾವೆಲ್ಲರೂ ಹಿರಿಕಿರಿಯರೆನ್ನದೆ ಕನ್ನಡ ನೆಲದ ಕಡುಗಲಿಗಳು ನಾವು ನಮ್ಮತನ, ನಮ್ಮ ನಾಡÀನ್ನು ಧರ್ಮದಕ್ಷತೆಗಳ ನೆಲೆವೀಡು ಮಾಡಲು ದುಡಿಯಬೇಕು ಎನ್ನುತ್ತಾ ಯುವ ಜನಾಂಗಕ್ಕೆ ಪೆÇ್ರೀತ್ಸಾಹಿಸಿದ್ದರು.

ಬಡತನದ ತಳಮಟ್ಟದ ಅನುಭವ ರೂಢಿಸಿದ್ದ ಇವರು ಸ್ಥಿತಿವಂತ ಜೀವನವನ್ನು ಸಾಗಿಸಲು ಸಾಕಷ್ಟು ಅನುಕೂಲತೆಗಳನ್ನು ಹೊಂದಿದ್ದರೂ ಎಂದೂ ಐಷಾರಾಮಿ ಬದುಕಿಗೆ ಬಲಿಯಾಗದೆ ಗ್ರಾಮೀಣ ಜನರ ಮುಗ್ಧತೆಯನ್ನೇ ತನ್ನ ಜೀವನದುದ್ದಕ್ಕೂ ಕಾಯ್ದುಕೊಂಡರು. ಸಭೆ ಸಮಾರಂಭಗಳಿಗೆ ತಡವಾಗಿ ಬರುವುದು ರಾಜಕಾರಣಿಗಳ ಸ್ವಭಾವ. ಆದರೆ ಸುವರ್ಣರು ಇದಕ್ಕೆ ಅಪವಾದ. ಯಾರಾದರೂ ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಒಮ್ಮೆ ಒಪ್ಪಿಕೊಂಡರೆ ನಿಮಿಷವೂ ಹೆಚ್ಚು ಕಡಿಮೆ ಆಗದಂತೆ ಸಕಾಲದಲ್ಲಿ ಹಾಜರಾಗುವುದು ಇವರ ಸಮಯಪ್ರಜ್ಞೆಗೆ ಸಾಕ್ಷಿಯಾಗಿತ್ತು. ಇಂತಹ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ತಾವು ಕಾಲಕ್ಕೆ ಅಧೀನ ಎಂದು ಭಾವಿಸುತ್ತಾ ಒಳ್ಳೆಯ ಕೆಲಸಕ್ಕೆ ಎಂದೂ ಮೀನಾಮೇಷ ಎಣಿಸಿ ಕಾಲ ಕಳೆಯಬಾರದು ಎಂದು ಸಲಹುತ್ತಿದ್ದರು. ಅಲ್ಲದೆ ತಮ್ಮ ಕಾರ್ಯಕ್ರಮಗಳಗಳು, ಭಾರತ್ ಬ್ಯಾಂಕ್‍ನ ಪ್ರತೀಯೊಂದು ಶಾಖೆಗಳನ್ನೂ ïಸ್ವತಃ ತಮ್ಮ ಅಭಯಹಸ್ತದಿಂದಲೇ ಉದ್ಘಾಟಿಸುತ್ತಿದ್ದರು. ಯಾವನೇ ಮಂತ್ರಿ, ರಾಜಕಾರಣಿ ಅಥವಾ ಧಾರ್ಮಿಕ ಮುಖಂಡರಿಗೆ ಮಣೆ ಹಾಕದಿದ್ದರೂ ಆ ಸಮಯಕ್ಕೆ ಇವರಲ್ಲಿನ ಯಾರಾದರೂ ಉಪಸ್ಥಿತರಿದ್ದಲ್ಲಿ ಅವರಿಗೆ ಅಪಾರ ಗೌರವವನ್ನಿತ್ತು ಅವರಿಂದ ದೀಪ ಬೆಳಗಿಸುತ್ತಿದ್ದರು. ಗ್ರಾಹಕರೇ ನಮ್ಮ ದೇವರು. ದೇವರ ಅನುಗ್ರಹದಿಂದಲೇ ಬ್ಯಾಂಕ್‍ನ ಮುನ್ನಡೆ ಎಂದು ಮಾನ್ಯರನ್ನು ಮನವೊಲಿಸುತ್ತಿದ್ದರು.

ಬ್ಯಾಂಕ್ ಮುಖೇನ ಕೇಳಿಕೊಂಡು ಬಂದವರೆಲ್ಲರನ್ನೂ ಸಂತುಷ್ಟ ಪಡಿಸಿ ಕಾರ್ಮಿಕರನ್ನೂ ನೌಕರರನ್ನಾಗಿಸಿ ಬದುಕು ಕಟ್ಟಿಸಿಕೊಟ್ಟ ಹಿರಿಮೆ ಇವರದ್ದು. ಗ್ರಾಹಕರಿಗೂ, ಸಾಲ ಪಡೆಯುವವರಿಗೂ ಅಷ್ಟೇ, ಅವರಲ್ಲಿ ಹಣ ಕಟ್ಟುವ ತಾಕತ್ತಿದ್ದರೆ ಸಾಕು ಕಾಗದಪತ್ರಗಳ ಅಗತ್ಯಕ್ಕಿಂತ ವಿಶ್ವಾಸದ ದೃಢತೆಯಿಂದಲೇ ಹಣಕಾಸು ನೆರವು ಒದಗಿಸಿ ಸಹಕರಿಸುತ್ತಿದ್ದರು. ಆದ್ದರಿಂದಲೇ ಇಂದು ಸಾವಿರಾರು ಚಿಕ್ಕಪುಟ್ಟ, ಮಧ್ಯಮ ವರ್ಗದ ಉದ್ಯೋಗಿಗಳು ಉದ್ಯಮಿಗಳಾಗಿ ಶ್ರೀಮಂತರಾಗಿದ್ದು ಆ ಪೈಕಿ ಅನೇಕರು ಜಯ ಸುವರ್ಣರನ್ನು ತಮ್ಮ ಪಾಲಿನ ದೇವರು ಎಂದೂ ಕೊಂಡವರಿದ್ದಾರೆ. ಇವರೋರ್ವ ಜಾತ್ಯಾತೀತ ವ್ಯಕ್ತಿ. ಪ್ರತಿಭೆಗೆ ಪುರಸ್ಕಾರ ಕೊಡುತ್ತಿದ್ದ ಅವರು ನಾಟಕ, ಯಕ್ಷಗಾನ, ಹರಿಕಥೆ, ಕಲಾ ಪೆÇ್ರೀತ್ಸಾಹಕರಾಗಿ ಎಲ್ಲರನ್ನೂ ಪೆÇ್ರೀತ್ಸಹಿಸುತ್ತಿದ್ದರು. ಸಾಹಿತ್ಯ ಸಂಸೃತಿ ಪ್ರಸಾರದಲ್ಲಾಗಲೀ, ಅಭಿವೃದ್ಧಿಗೆ ಸಂಬಂಧಿತ ಎಲ್ಲಕ್ಕೂ ಪ್ರೇರಕರಾಗಿ ಮೊದಲು ಪ್ರತಿಭಾವಂತರಿಗೆ ಗಮನ ಕೊಡುತ್ತಿದ್ದ ಜಯಣ್ಣ ಅವರದ್ದು ಗುಣಗ್ರಾಹಿ ಸ್ವಭಾವ. ಸದಾ ಪಕ್ಷತೀತರಾಗಿ ತಮ್ಮವರು ಯಾವ ಪಕ್ಷದಲ್ಲಿದ್ದರೂ ತೆರೆಮರೆಯಲ್ಲಿದ್ದೆ ಬೆಂಬಲಿಸುತ್ತಿದ್ದರು. ಸ್ವಜಾತೀಯರಿಗೆ ತಮ್ಮ ಬ್ಯಾಂಕ್‍ನಲ್ಲಿ ಹೆಚ್ಚು ಮಹತ್ವ ಕೊಡುತ್ತಿದ್ದಾರೆ ಎಂಬ ಅಪವಾದಕ್ಕೆ ಕಾರಣರಾದರೂ ಸ್ವಜಾತಿಯರಿಗೆ ಹೆಚ್ಚು ಉಪಕಾರ ಮಾಡಿಲ್ಲವೆಂಬ ಅನೇಕರ ಟೀಕೆಗಳನ್ನೂ ಅವರು ಮನಸ್ಸಿಗೆ ಹಚ್ಚಿಕೊಳ್ಳದೆ ತಮ್ಮ ಮಾತಿನಲ್ಲೇ ಎಲ್ಲದ್ದಕ್ಕೂ ಉತ್ತರಿಸಿ ತಣ್ಣಗಾಗಿಸುತ್ತಿದ್ದರು. ಸಜ್ಜನರಿಗೆ ಸಜ್ಜನರಾಗಿ, ಸಮಾಜ ಕಂಟಕಿಗಳಿಗೆ ಕಂಟಕರಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಹಾದಿ ಮಾಡಿ ಕೊಡುತ್ತಿದ್ದರು. ಅನ್ಯರಿಕ್ಕಿಂತ ಸ್ವಸಮಾಜದರಿಂದಲೇ ಭಾರೀ ಅವಮಾನ, ಅನ್ಯಾಯ, ಕಷ್ಟನಷ್ಟಗಳಿಗೆ ಜೀವವೊಡ್ಡಿ ಅಪವಾದಗಳನ್ನೇ ಪಂಥಾಹ್ವಾನವಾಗಿಸಿ ಕಲ್ಲುಮುಳ್ಳಿನ ಹಾದಿಯನ್ನು ತುಳಿದು ಏರಿದ ಎತ್ತರ ಅನುಪಮ. ಆದರೂ ಎಂದೂ ತಮ್ಮ ತಾಳ್ಮೆಯನ್ನು ಕುಂದಿಸಿರದೆ ಮುನ್ನಡೆಯುವ ಶೈಲಿಯೇ ವಿಭಿನ್ನ. ಎಲ್ಲೂ ಬೇಕಾಬಿಟ್ಟಿ ಮಾತನಾಡದೆ ಎಲ್ಲರನ್ನೂ ಕೇಳಿಸಿಕೊಂಡರೂ ಸಮಯೋಜಿತವಾಗಿ ತನ್ನದೇ ಶೈಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರಣ ಜಯಣ್ಣ ಏಕಮೆವ ಜಯತೆ ಎಂದೂ ಗುರುತಿಸಲ್ಪಟ್ಟಿದ್ದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿ, ಕೋಟಿ-ಚೆನ್ನಯರ ದಿಟ್ಟ ಸಾಹಸವನ್ನು ರೂಢಿಸಿ, ಕಾಂತಾಬಾರೆ-ಬೂದಬಾರೆ ಅವರ ತ್ಯಾಗಮಯ ಬದುಕು, ಜೀವನಶೈಲಿ, ಏಕತೆಯನ್ನು ಸಿದ್ಧಿಸಿ `ಕಟಪಾಡಿ ಶ್ರೀ ವಿಶ್ವನಾಥ', `ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ಮಂಜುನಾಥೇಶ್ವರ', ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಇಲ್ಲಿನ ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಹಾಗೂ ಕುಲದೈವ ದೇವರು, ಬ್ರಹ್ಮ ಬೈದರ್ಕಳರ ಅನುಗ್ರಹಗಳೊಂದಿಗೆ ಬಾಳಿದವರು. ಸ್ವಜಾತೀಯ ಅನನ್ಯ ಆರಾಧಕರಾಗಿದ್ದರೂ ಅನ್ಯರಲ್ಲಿ ಅಪಾರ ಬಾಂಧವ್ಯತೆ ಇರಿಸಿದ್ದ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ಷೇತ್ರಗಳ ಕನಸುಗಾರರಾಗಿ ಶಿಸ್ತು, ಪ್ರಾಮಾಣಿಕತೆ, ನೇರ ನಡೆನುಡಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸದಾ ಪ್ರೇರಕಶಕ್ತಿಯಾಗಿ ಬಾಳಿದವರು. ಹಿರಿಯರಿಂದ ಕಿರಿಯರಲ್ಲೂ ಸ್ನೇಯಮಯಿ `ಜಯಣ್ಣ' ಆಗಿಯೇ ಸರ್ವರ ಪ್ರೀತಿಗೆ ಭಾಜನರಾಗಿದ್ದರು.

ಇಂತಹ ಮೇರು ವ್ಯಕ್ತಿತ್ವದ ಜಯಣ್ಣರ ಉತ್ಕೃಷ್ಟವಾದ ಆದರ್ಶವನ್ನು ಅನುಕರಣೀಯವಾಗಿಸಿ ಇನ್‍ಸ್ಟಿಟ್ಯೂಟ್ ಆಫ್ ಎಕಾನಾಮಿಕ್ಸ್ ಸ್ಟಡೀಸ್ (ಐಇಎಸ್) ಸಂಸ್ಥೆ `ಉದ್ಯೋಗ ರತ್ನ', ಬಿಲ್ಲವ ಸಮಾಜ ಬಾಂಧವರು `ಸಮಾಜ ರತ್ನ', ಪಿಂಗಾರ ಪತ್ರಿಕೋದ್ಯಮ ಸಂಸ್ಥೆ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ', ಕರ್ನಾಟಕ ರಾಜ್ಯ ಸರಕಾರ `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಪ್ರದಾನಿಸಿವೆ. ಇವಲ್ಲದೆ ಸಾವಿರಾರು ಸನ್ಮಾನ, ಪುರಸ್ಕಾರಗಳಿಗೆ ಭಾಜನರಾಗಿದ್ದ ಜಯಣ್ಣ ಇಂದು ಬಾರದ ಲೋಕಕ್ಕೆ ಹೋದ ಸೋಲಿಲ್ಲದ ಸರದಾರ ಆಗಿದ್ದಾರೆ. ಅವರ ಸಾಧನೆಯ ಹಾದಿಯು ಭಾವೀ ಜನಾಂಗಕ್ಕೆ ಮೇಲ್ಫಂಕ್ತಿಯೇ ಸರಿ. ಜನಸಾಮಾನ್ಯರಿಂದ ಜನಮಾನ್ಯರಲ್ಲೂ `ಶೇಠ್', `ಬಿಲ್ಲವ ರತ್ನ' ಎಂದೇ ಗುರುತಿಸಿ ಕೊಂಡಿದ್ದ ಜಯಣ್ಣ ನಮ್ಮನ್ನಗಲಿ ಗುರುಪಾದ ಐಕ್ಯವಾಗಿದ್ದರೂ ಮೃತ್ಯುಂಜಯರಾಗಿ ಮತ್ತೆ ತಮ್ಮ ಮುಂದಿನ ಜನ್ಮದಲ್ಲೂ ನಮ್ಮೊಡನೆಯೇ ಹುಟ್ಟಿ ಬರುವ ಆಶಯ ತÀಮ್ಮದಾಗಿಸಿದ ಜನತೆ ಅಗಲಿದ ಜಯ ಸುವರ್ಣರ ದಿವ್ಯಾತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರುತ್ತಾ ಅವರ ಜನ್ಮ ವಜ್ರೋತ್ಸವದ ಈ ದಿನ `ಹ್ಯಾಪ್ಪೀ ಬರ್ತ್‍ಡೇ ಜಯಣ್ಣ' ಎಂದು ನಮಿಸುತ್ತಿದೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here