Friday 19th, April 2024
canara news

ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್ ಗ್ರಂಥ ಕುಸುಮ ಸಮರ್ಪಣೆ

Published On : 20 Jul 2021   |  Reported By : Rons Bantwal


ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್ : ಡಾ| ಜಿ.ಎನ್ ಉಪಾಧ್ಯ

ಮುಂಬಯಿ (ಆರ್‍ಬಿಐ), ಜು.20: ಘನ ವ್ಯಕ್ತಿತ್ವದ ಜಾರ್ಜ್ ಅವರು ಮುಂಬೈಯಲ್ಲಿ ಅರಳಿದ ಮಹಾನ್ ಪ್ರತಿಭೆ. ಮುಂಬೈನ ಶ್ರಮಿಕ ಆಂದೋಲನದಲ್ಲಿ ಮಿಂಚಿದ ಸಂಚಾರ; ಸಂಚಲನವನ್ನು ಉಂಟು ಮಾಡಿ ಲಕ್ಷಾಂತರ ಬಡ ಕಾರ್ಮಿಕರ ಬಾಳ್ವೆಗೆ ಬೆಳಕಾದ ಕ್ರಾಂತಿಯ ಕಿಡಿ ಅವರು. ಲೋಹಿಯಾವಾದಿ, ಛಲದಂಕಮಲ್ಲ, ದಣಿವರಿಯದ ನಿಷ್ಠಾವಂತ ರಾಜಕಾರಣಿ, ಕಾರ್ಮಿಕ ನೇತಾರ ಹೀಗೆ ನಾನಾ ನೆಲೆಗಳಲ್ಲಿ ಲೋಕಮಾನ್ಯರಾದ ಶ್ರೇಯಸ್ಸು ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ. ಮುಂಬೈ ಕನ್ನಡಿಗ, ಪದ್ಮವಿಭೂಷಣ ಖ್ಯಾತಿಯ ಜಾರ್ಜ್ ಫೆರ್ನಾಂಡಿಸ್ ಅವರು ಬದುಕಿದ್ದಾಗಲೇ ದಂತಕತೆಯಾದ ಧೀಮಂತ ಚೇತನ. ಅವರು ಮಹಾನ್ ಹೋರಾಟಗಾರ, ಮುತ್ಸದ್ಧಿ, ನುರಿತ ರಾಜಕಾರಣಿ, ಪ್ರಸಿದ್ಧ ಕಾರ್ಮಿಕ ನೇತಾರ, ಸಮಷ್ಟಿಯ ಹಿತಕ್ಕಾಗಿ ಅಹರ್ನಿಶಿ ಹೋರಾಡಿದ ಧೀರ ಜನನಾಯಕ. ಲೋಕೋಪಯೋಗಿಯಾದ ಅಸಾಧಾರಣವಾದ ಕಾರ್ಯ ಸಾಹಸಗಳನ್ನು ಮಾಡಿ ಸಫಲರಾದವರು ಜಾರ್ಜ್ ಎಂಬುದು ಉಲ್ಲೇಖನೀಯ. ಪ್ರತಿಯೊಬ್ಬ ವ್ಯಕ್ತಿಯೂ ಚರಿತ್ರೆಗೆ ತನ್ನ ಪಾಲಿನ ಕೊಡುಗೆಯನ್ನು ಸಂದಾಯ ಮಾಡುತ್ತಾನೆ. ಆದರೆ ಚರಿತ್ರೆ ನಿರ್ಮಿಸುವವರ ಸಂಖ್ಯೆ ವಿರಳ. ನಿಜವಾದ ಅರ್ಥದಲ್ಲಿ ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ನಮ್ಮ ಜಾರ್ಜ್ ಎಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅಭಿಪ್ರಾಯಪಟ್ಟರು.

ಸಾಂತಕ್ರೂಜ್ ಪೂರ್ವದ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‍ನ ರಾನಡೆ ಭವನದಲ್ಲಿ ಇತ್ತೀಚೆಗೆ (ಜು.13) ಸುರೇಖಾ ಹೇಮನಾಥ ದೇವಾಡಿಗ ರಚಿತ `ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್' ಗ್ರಂಥ ಕುಸುಮ ಕೃತಿ ಸಮರ್ಪಣ ಕಾರ್ಯಕ್ರಮದಲ್ಲಿ ಗ್ರಂಥವನ್ನು ಸ್ವೀಕರಿಸಿ ಡಾ| ಉಪಾಧ್ಯ ಸ್ವೀಕರಿಸಿ ಮಾತನಾಡಿದರು.

ಜಾರ್ಜ್ ಅವರು ಮಾನವತಾವಾದಿ. ಜಾತಿ, ಮತ, ಪಂಥ ಪಂಗಡಗಳನ್ನು ಮೀರಿ ಬೆಳೆದ ದೂರದೃಷ್ಟಿ ಹೊಂದಿದ್ದ ಪ್ರಗತಿಶೀಲ ಚಿಂತಕರೂ ಆಗಿದ್ದರು ಎಂಬುದು ಹೇಳಲೇಬೇಕಾದ ಮಾತು. ಸಹಜವಾದ ಪ್ರತಿಭೆ ಸಮಾಜವನ್ನು ಮೀರಿ ಬೆಳೆಯಬಲ್ಲದು ಎಂಬುದಕ್ಕೆ ಜಾರ್ಜ್ ಅವರು ಉತ್ತಮ ನಿದರ್ಶನ. ಈ ಕೃತಿಯಲ್ಲಿ ಹಲವು ವಿಧ, ನಾನಾ ಬಗೆಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ವ್ಯಕ್ತಿಮತ್ತೆಯನ್ನು ಕಂಡರಿಯಲಾಗಿದೆ. ಅವರ ಸರೀಕರು, ಮಾಧ್ಯಮ ಮಿತ್ರರು, ಸಾಹಿತಿಗಳು, ಬಂಧು ಮಿತ್ರರು, ಲೇಖಕರು ಜಾರ್ಜ್‍ರ ಉದಾತ್ತ ವ್ಯಕ್ತಿತ್ವವನ್ನು ಮನಂಬುಗುವಂತೆ ಅನಾವರಣ ಗೊಳಿಸಿದ್ದಾರೆ. ಜಾರ್ಜ್ ಅವರ ಕುರಿತು ಅಮ್ಮೆಂಬಳ ಆನಂದ ಅವರು ಕನ್ನಡದಲ್ಲಿ ಕೃತಿಯನ್ನು ರಚಿಸಿದ್ದಾರೆ.ಇದೀಗ ದೊಡ್ಡ ಪ್ರಮಾಣದಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಧೀಮಂತ ವ್ಯಕ್ತಿತ್ವದ ಸಮಗ್ರ ದರ್ಶನ ಪ್ರಸ್ತುತ ಕೃತಿಯಲ್ಲಿ ದಾಖಲಾಗಿದೆ. ಈ ಕೃತಿಯನ್ನು ಅಭಿಜಿತ್ ಪ್ರಕಾಶನವು ಪ್ರಕಟಿಸಿದೆ. ಇದೊಂದು ಒಳ್ಳೆಯ ಜರೂರಿನ ಕೃತಿ. ಬಹು ಶ್ರಮವಹಿಸಿ ಈ ಕೃತಿಯನ್ನು ರಚಿಸಿದ ನಮ್ಮ ವಿಭಾಗದ ಸುರೇಖಾ ದೇವಾಡಿಗ ಅವರ ಶ್ರಮ ಸಾರ್ಥಕವಾಗಿದೆ ಎಂದು ಈ ಮೌಲಿಕ ಕೃತಿಗಾಗಿ ಸುರೇಖಾ ದೇವಾಡಿಗ ಅವರಿಗೆ ಡಾ| ಉಪಾಧ್ಯ ಹಾರ್ದಿಕ ಅಭಿನಂದನೆ ಸಲ್ಲಿಸಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಮಾತನಾಡುತ್ತಾ, ಕಾರ್ಮಿಕ ನೇತಾರನಾಗಿ, ರಾಜಕೀಯ ಮುಖಂಡರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ ಜಾರ್ಜ್ ಫೆರ್ನಾಂಡಿಸ್ ಅವರ ಜೀವನದ ವಿವಿಧ ಮುಖಗಳು, ಏಳುಬೀಳುಗಳನ್ನು ಈ ಕೃತಿಯಲ್ಲಿ ಅವರ ನಿಕಟವರ್ತಿಗಳು, ಆತ್ಮೀಯರು ಹಂಚಿ ಕೊಂಡಿದ್ದಾರೆ. ಇಷ್ಟೆಲ್ಲ ಮಾಹಿತಿಗಳನ್ನು ಕಲೆ ಹಾಕುವುದು ಅಷ್ಟು ಸುಲಭದ ಸಂಗತಿಯಲ್ಲ. ಸುರೇಖಾ ದೇವಾಡಿಗ ಅವರು ಬಹಳ ಪರಿಶ್ರಮಪಟ್ಟು ಸಮಯೋಚಿತ ವಿಷಯಗಳನ್ನು ಸಂಗ್ರಹಿಸಿ ದಾಖಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಅವರ ಜೀವನದ ಯಶೋಗಾಥೆ ಬಿಂಬಿಸುವ ಈ ಕೃತಿ ಕನ್ನಡ ವಿಭಾಗದ ಸಂಶೋಧನ ಸಹಾಯಕಿ ಆಗಿರುವ ಸುರೇಖಾ ಅವರು ಸಂಪಾದಿಸಿರುವುದು ಅಭಿಮಾನದ ಸಂಗತಿ ಎಂದು ಅಭಿನಂದಿಸಿದರು.

ಸುರೇಖಾ ಹೆಚ್.ದೇವಾಡಿಗ ಅವರು ಮೂಲತಃ ದೇರೆಬೈಲು ಕೊಂಚಾಡಿ ಮಂಗಳೂರು ಮೂಲದರು. ಕಳೆದ ಮೂರು ದಶಕಗಳಿಂದ ಮುಂಬಯಿಯಲ್ಲಿ ನೆಲೆಸಿರುವ ಇವರು ಕ್ರೀಡಾಪಟುವಾಗಿ ಹತ್ತಾರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಹಿಳೆ. ಸದ್ಯ ಮುಂಬಯಿ ಮಹಾನಗರದ ವರ್ಲಿ ನಿವಾಸಿ ಆಗಿದ್ದಾರೆ. 2016ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದು 2019ರಲ್ಲಿ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್ ಪದವೀಧರೆಯಾದರು. ಸುರೇಖಾ ಅವರ ಸಂಪ್ರಬಂಧ `ದೇವಾಡಿಗ ಜನಾಂಗ ಒಂದು ಸಾಂಸ್ಕøತಿಕ ಅಧ್ಯಯನ'ವು ಅಭಿಜಿತ್ ಪ್ರಕಾಶನದ ಮೂಲಕ ಬೆಳಕು ಕಂಡಿದೆ.

ಗ್ರಂಥ ಸಮರ್ಪಣಾ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ| ಉಮಾ ರಾವ್, ಕಲಾ ಭಾಗ್ವತ್, ಶೈಲಜಾ ಹೆಗಡೆ, ಪ್ರತಿಭಾ ರಾವ್, ಕನ್ನಡ ವಿಭಾಗದ ಕಚೇರಿ ಸಹಾಯಕರಾದ ರೇಶ್ಮಾ ಮಾನೆ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಕೃತಿಯನ್ನು ಖರೀದಿಸಲು ಇಚ್ಛಿಸುವವರು ಸುರೇಖಾ ದೇವಾಡಿಗರವರನ್ನು (ಮೊ: 9619902920) ಮೂಲಕ ಸಂಪರ್ಕಿಸಬಹುದು ಎಂದು ಅಭಿಜಿತ್ ಪ್ರಕಾಶನವು ತಿಳಿಸಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here