Monday 25th, October 2021
canara news

ಎನ್‍ಎಂಸಿ ನಿಬಂಧನೆಗಳ ತಿದ್ದುಪಡಿಗೆ ಐಎಂಎ ಆಗ್ರಹ

Published On : 30 Jul 2021   |  Reported By : media release


ಮಂಗಳೂರು: ಆಧುನಿಕ ವೈದ್ಯಕ್ಷೇತ್ರಕ್ಕೆ ಮಾರಕವಾಗಿರುವ ಹಾಗೂ ಅರ್ಧ ಕಲಿತ ವೈದ್ಯರನ್ನು ಸೇವೆಗೆ ಕರೆತರುವ ಮೂಲಕ ಜನರ ಜೀವದ ಜತೆಗೆ ಚೆಲ್ಲಾಟವಾಡಲು ಕಾರಣವಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯ ನಿಯಮ ಮತ್ತು ನಿಬಂಧನೆಗಳಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ರಾಜ್ಯ ಐಎಂಎ ಅಧ್ಯಕ್ಷ ಡಾ.ವೆಂಕಟಾಚಲಪತಿ ಆಗ್ರಹಿಸಿದರು.
ಕಾಯ್ದೆಯ ಸೆಕ್ಷನ್ 32, 50 ಮತ್ತು 51ನ್ನು ತೊಡೆದುಹಾಕಬೇಕು ಎಂದು ಅವರು ಮಂಗಳೂರು ಐಎಂಎ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಧಿಕೃತ ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ನೋಂದಾಯಿಸದ ಅನರ್ಹ ವೈದ್ಯರು ದೇಶದಲ್ಲಿ ಹತ್ತು ಲಕ್ಷದಷ್ಟು ಇದ್ದು, ರೋಗಿಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಪದವಿ ಪಡೆದ ವೈದ್ಯರಿಗೆ ಲಗಾಮು ಹಾಕಲು ಹಲವಾರು ಕಾನೂನುಗಳಿದ್ದರೂ, ನಕಲಿ ವೈದ್ಯರ ಹಾವಳಿ ತಡೆಗೆ ಯಾವುದೇ ಕಾಯ್ದೆಗಳಿಲ್ಲ; ಇರುವ ಕಾಯ್ದೆಗಳು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ತಕ್ಷಣವೇ ಸರ್ಕಾರ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವೈದ್ಯರ ಹಾಗೂ ವೈದ್ಯಸಿಬ್ಬಂದಿಯ ಮೇಲೆ ದೌರ್ಜನ್ಯ ಹಾಗೂ ಹಲ್ಲೆಗಳು ಹೆಚ್ಚುತ್ತಿವೆ. ಈ ರೀತಿಯ ಘಟನೆಗಳು ವೈದ್ಯರ ಮಾನಸಿಕ ಬಲವನ್ನು ಕುಗ್ಗಿಸಿ, ಕೈಲಾಗುವಂತಿದ್ದರೂ ಕೇಸುಗಳನ್ನು ಮುಂದೂಡುವ ಋಣಾತ್ಮಕ ಕ್ರಮಗಳಿಗೆ ವೈದ್ಯರು ಇಳಿಯುವಂತೆ ಮಾಡಿ ರೋಗಿಗಳು ಪರದಾಡುವಂತಾಗಿದೆ. ಈ ರೀತಿ ಹಲ್ಲೆಮಾಡುವವರನ್ನು ಬೇಗನೇ ಬಂಧಿಸಿ ಶಿಕ್ಷಿಸುವ ಕಾನೂನು ಜಾರಿಗೊಳಿಸಬೇಕು. ತಪ್ಪಿತಸ್ಥರಿಗೆ ಜಾಮೀನು ಸಿಗಲಾರದಂತೆ ಈಗಿರುವ ಕಾನೂನಿಲ್ಲಿ ಬದಲಾವಣೆ ತರಬೇಕು ಎಂದು ಸಲಹೆ ಮಾಡಿದರು.

ಈಗಾಗಲೇ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕಾಯ್ದೆಯಲ್ಲಿ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಮಾತ್ರ ಕಠಿಣ ಶಿಕ್ಷೆ ನೀಡುವ ಉಲ್ಲೇಖವಿದೆ. ಆದರೆ ಈ ರೀತಿಯ ಘಟನೆಗಳು ಸಂಭವಿಸುವುದು ಕೇವಲ 1% ಮಾತ್ರ. ಇನ್ನುಳಿದ 99% ಬೆದರಿಸುವ ಹಾಗೂ ಕಿರುಕುಳ ನೀಡುವವರಿಗೂ ಸಹ 3 ವರ್ಷಗಳ ಶಿಕ್ಷೆಯಾಗಬೇಕೆಂದು ಆಗ್ರಹ ಮಾಡುತ್ತೇವೆ. ಅಂತೆಯೇ ತ್ವರಿತ ನ್ಯಾಯಾಲಯಗಳನ್ನು ನಿರ್ಮಿಸುವುದರ ಜೊತೆಗೆ ವೈದ್ಯರ ರಕ್ಷಣಾ ಕಾನೂನನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಹಕ ರಕ್ಷಣಾ ಕಾನೂನಿನಡಿಲ್ಲಿ ವೈದ್ಯರು ನೀಡಬೇಕಾದ ಅವೈಜ್ಞಾನಿಕವಾಗಿ ಪರಿಹಾರ ಧನಕ್ಕೆ ಮಿತಿ ಹೇರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದ ಖಾಸಗೀ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸುವಲ್ಲಿ ಉಂಟಾಗಿರುವ ಅಡೆತಡೆಯನ್ನು ಸರ್ಕಾರ ಖಂಡಿಸುತ್ತದೆ.
ಅದರಲ್ಲೂ ಮುಖ್ಯವಾಗಿ ಟ್ರೇಡ್ ಲೈಸನ್ಸ್ ಹಾಗೂ ಅಗ್ನಿಶಾಮಕ ವಿಭಾಗದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಷ್ಟಕರವಾಗಿದೆ. ಇದು ತಾಲೂಕು ಮತ್ತು ನಗರಗಳಲ್ಲಿ ಇರುವ ಕಡಿಮೆ ದರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಿಗೆ ಸಂಕಷ್ಟಗಳು ಎದುರಾಗಿವೆ. ಈ ನಿಟ್ಟಿನಲ್ಲಿ ಸರಕಾರವು ಈ ಕಾನೂನಿಡಿಯಲ್ಲಿ ಆಸ್ಪತ್ರೆಗಳನ್ನು ಏಕ ಗವಾಕ್ಷಿ ಮೂಲಕ, ನೋಂದಾಯಿಸುವ ಪ್ರಕ್ರಿಯೆನ್ನು ಸರಳಿಕರಣಗೊಳಿಸಿ ತನ್ಮೂಲಕ ರೋಗಿಗಳ ಮೇಲೆ ಬೀಳುವ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿಸಿಐಎಂನ ಇತ್ತೀಚಿನ ಆದೇಶದಲ್ಲಿ ಶಲ್ಯತಂತ್ರದ ಆಯುರ್ವೇದ ಸ್ನಾತಕೋತ್ತರ ಕೋರ್ಸ್‍ಗಳಿಗೆ ಎಂಎಸ್ (ಜನರಲ್ ಸರ್ಜರಿ) ಎಂಬ ನಾಮಾಂಕಿತವನ್ನೂ ನೀಡಿದೆ. ಸಿಸಿಐಎಂ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆಯನ್ನು ಮತ್ತು ಅವರ ಅಭ್ಯಾಸವನ್ನು ಸ್ವತಂತ್ರವಾಗಿ ಅಭ್ಯಾಸ ಮಾಡಲು ಅವಕಾಶ ನೀಡಿದೆ. ಆಯುರ್ವೇದ, ಯುನಾನಿ ಮತ್ತಿತರ ವ್ಯವಸ್ಥೆಗಳು ತಮ್ಮದೇ ಆದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿವೆ ಮತ್ತು ಐಎಂಎ ಇದರ ಬಗ್ಗೆ ಹೆಮ್ಮೆ ಪಡುತ್ತದೆ. ಈ ನಿಟ್ಟಿನಲ್ಲಿ ಸರಕಾರ ಈ ಪ್ರಾಚೀನ ವೈದ್ಯಕೀಯ ಸಂಪತ್ತಿನ ಅತ್ಯಂತ ಶುದ್ಧ ರೂಪದ ಸಂರಕ್ಷಣೆಗೆ ಶ್ರಮವಹಿಸಬೇಕು. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯಬೇಕು ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ವೈದ್ಯಕೀಯ ಪದ್ಧತಿಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.

ಮಂಗಳೂರು ಐಎಂಎ ಅಧ್ಯಕ್ಷ ಎಂ.ಎ.ಆರ್.ಕುಡ್ವಾ, ಕಾರ್ಯದರ್ಶಿ ಡಾ.ಅನಿಮೇಶ್ ಜೈನ್, ಪಿಆರ್‍ಓ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ವೈದ್ಯ ಬರಹಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಯ್ಯ ಕುಲಾಲ್, ಡಾ.ಕೆ.ಆರ್.ಕಾಮತ್, ಡಾ.ರವೀಂದ್ರ, ಡಾ.ಕುಮಾರಸ್ವಾಮಿ ಉಪಸ್ಥಿತರಿದ್ದರು.
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here