Friday 22nd, September 2023
canara news

ಡಾ| ವಿಶ್ವನಾಥ ಕಾರ್ನಾಡ್‍ರ ಎರಡು ಕೃತಿಗಳಿಗೆ ಕನ್ನಡ-ಸಂಸ್ಕೃತಿ ಇಲಾಖಾ ಪುರಸ್ಕಾರ

Published On : 07 Aug 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.04: ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಅತಿಥಿ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳಾಗಿರುವ ಡಾ| ವಿಶ್ವನಾಥ ಕಾರ್ನಾಡ್ ಅವರ `ಮುಂಬಯಿ ತುಳುವರ ವಲಸೆ' ಹಾಗೂ `ಸಮಚಿಂತನ' ಕೃತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಲಾ ರೂಪಾಯಿ 25,000/- ನಗದು ಪುರಸ್ಕಾರ ದೊರೆತಿದೆ. ಮುಂಬಯಿ ತುಳುವರ ವಲಸೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಬಲ್ಲ ಕೃತಿ ಮುಂಬಯಿ ತುಳುವರ ವಲಸೆ ಈಗ ಮರು ಮುದ್ರಣಗೊಂಡಿದೆ. ಅದೇ ರೀತಿ ಸಮಚಿಂತನ ವಿಮರ್ಶಾ ಕೃತಿ. ಈ ಎರಡೂ ಕೃತಿಗಳು ಕನ್ನಡ ವಿಭಾಗದ ಪ್ರಕಟಣೆಗಳಾಗಿವೆ.

ಡಾ| ವಿಶ್ವನಾಥ ಕಾರ್ನಾಡ: ಅವರದು ಹೋರಾಟದ ಬದುಕು. ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ಬಂದು ಇಲ್ಲಿನ ರಾತ್ರಿ ಶಾಲೆಯಲ್ಲಿ ಓದಿ ಮೇಲೆ ಬಂದು ಘನ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಈಗ ಅವರಿಗೆ 82ರ ಹರೆಯ. ಮುಂಬಯಿ ಮಹಾನಗರದ ಬದುಕಿನ ನಾನಾ ಸ್ಥಿತ್ಯಂತರಗಳನ್ನು ಅವರಂತೆ ಕಂಡು ಅನುಭವಿಸಿ ದಾಖಲಿಸಿದ ಸಾಹಿತಿಗಳು ಬಹಳ ಕಡಿಮೆ ಮೂವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಸಾಹಿತ್ಯ ಕೃತಿಗಳನ್ನು ರಚಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕಾರ್ನಾಡರ ಜೀವನ ಸಾಧನೆ ಹೊಸ ತಲೆಮಾರಿಗೆ ಪ್ರೇರಣದಾಯಿ ಆಗಿದೆ.

ಮುಂಬಯಿ ಮಹಾನಗರದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಡಾ| ಕಾರ್ನಾಡ ಅವರೋರ್ವರು. ಅವರದು ಬಹುಮುಖ ಪ್ರತಿಭೆ ಹಾಗೂ ನಾನಾ ಬಗೆಯ ವ್ಯಕ್ತಿತ್ವ. ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಕವಿಯಾಗಿ. ಕತೆಗಾರರಾಗಿ, ಅನುವಾದಕರಾಗಿ, ಸಾಹಿತ್ಯ ಪರಿಚಾರಕರಾಗಿ ಅವರು ಹೆಸರು ಮಾಡಿದ್ದಾರೆ. ಡಾ.ಕಾರ್ನಾಡ್ ಅವರದು ಬಹುಭಾಷಿಕ ಸಂವೇದನೆ. ಅವರ ಮನೆಮಾತು ತುಳು. ಕನ್ನಡ, ಹಿಂದಿ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಒಳ್ಳೆಯ ಪ್ರಭುತ್ವ ಹೊಂದಿರುವ ಅವರು ಬಹುಮುಖತೆಗೆ, ರಸಜ್ಞತೆಗೆ, ಸ್ವೋಪಜ್ಞತೆಗೆ ಉತ್ತಮ ನಿದರ್ಶನ. ಕಾರ್ನಾಡರು ಮುಂಬಯಿ ಮಹಾನಗರದಲ್ಲಿ ಅರಳಿದ ಸಾಹಿತಿ. ಶ್ರಮ, ದುಡಿಮೆ, ಸತತ ಪ್ರಯತ್ನಗಳಿಂದ ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಂಡ ಸಾಹಸಿ. ಈ ಮೂಲಕ ಮುಂಬಯಿ ಕನ್ನಡಿಗರ ಪ್ರೀತ್ಯಾದರಗಳಿಗೆ ಕಾರ್ನಾಡರು ಪಾತ್ರರಾಗಿದ್ದಾರೆ.

ವಿಶ್ವನಾಥ್ ಕಾರ್ನಾಡ್ ಅವರು ಕರ್ನಾಟಕ ಜಾನಪದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತ್‍ನ ಪ್ರಶಸ್ತಿ, ಕರ್ನಾಟಕ ಸಂಘ, ಮುಂಬಯಿ ಸಾಧನಾ ಪ್ರಶಸ್ತಿ, ಬಿಲ್ಲವರ ಅಸೋಸಿಯೇಶನ್ ಇದರ ಗುರುನಾರಾಯಣ ಪ್ರಶಸ್ತಿ, ರಾಮಚಂದ್ರ ಉಚ್ಚಿಲ್ ಪ್ರಶಸ್ತಿ, ಕೇರಳ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ವಚನಶ್ರೀ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಮೈಸೂರಿನ ದಸರಾ ಸಮ್ಮೇಳನದ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.

 
More News

ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ

Comment Here