Friday 9th, May 2025
canara news

ದೇವರು ವಿಜೃಂಭಿಸುವ ತೇರು (ರಥ) ಕಟ್ಟುವವರು ಇವರು....

Published On : 04 Dec 2021


ರಥೋತ್ಸವ ಹಿನ್ನೆಲೆಯಲ್ಲಿ ಭಕ್ತರಿಗೆ ರಥ ಸಿದ್ಧಪಡಿಸುವವರ ಬಗ್ಗೆ ಒಂದಿಷ್ಟು ಮಾಹಿತಿ

ಮುಂಬಯಿ (ಆರ್‍ಬಿಐ), ಡಿ.02: ಶತಮಾನಗಳಷ್ಟು ಹಳೆಯದಾದ ದೇವಸ್ಥಾನಗಳಲ್ಲಿ ರಥ(ತೇರು) ಮತ್ತು ವಾರ್ಷಿಕ ರಥೋತ್ಸವ ನಡೆಯುವುದು ವಾಡಿಕೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪುರಾತನ ದೇವಾಲಯಗಳಲ್ಲಿ ರಥೋತ್ಸವ ನಡೆಯುತ್ತದೆ. ಜೊತೆಗೆ ಕೆಲವೆಡೆ ರಥೋತ್ಸವದಂತೆ `ಗುರ್ಜಿ' ಉತ್ಸವ ನಡೆಯುತ್ತದೆ. ದಕ್ಷಿಣ ಭಾರತದ ರಥೋತ್ಸವ ಮತ್ತು ಉತ್ತರ ಭಾರತದ ದೇವಾಲಗಳಲ್ಲಿ ನಡೆಯುವ ರಥೋತ್ಸವ ಹಾಗೂ ರಥ ಸಿದ್ಧಪಡಿಸುವ ವಿಧಾನಗಳು ಭಿನ್ನವಾಗಿವೆ. ಹಲವು ದೇವಸ್ಥಾನಗಳಲ್ಲಿ ವಾರ್ಷಿಕ ರಥೋತ್ಸವ ಆರಂಭಗೊಂಡ ಹಿನ್ನೆಲೆಯಲ್ಲಿ ಭಕ್ತರಿಗೆ ರಥ ಕಟ್ಟುವವರ (ಸಿದ್ಧಪಡಿಸುವವರು) ಬಗ್ಗೆ ಒಂದಷ್ಟು ತಿಳಿಸುವ ಪ್ರಯತ್ನ ಹಿರಿಯ ಪತ್ರಕರ್ತ ಧನಂಜಯ ಗುರುಪುರ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ಸಾಮಾನ್ಯವಾಗಿ ದೇವಾಡಿಗರು, ಸಫಲಿಗರು, ಆಚಾರ್ಯರು ಮತ್ತು ಜೋಗಿ ಜನಾಂಗದವರು ರಥ ಕಟ್ಟುತ್ತಾರೆ. ಇದರಲ್ಲೂ ಬಹುತೇಕ ಕಡೆಗಳಲ್ಲಿ ದೇವಾಡಿಗರು ಅಥವಾ ಸಫಲಿಗರು ರಥ ಕಟ್ಟತ್ತಾರೆ ಎಂಬುದು ನಿರ್ವಿವಾದ. ರಥ ಕಟ್ಟುವ ದಿನಗಳಲ್ಲಿ ರಥ ಕಟ್ಟುವವರು ಮಾಂಸಾಹಾರ ವರ್ಜಿಸಬೇಕು ಮತ್ತು ಅಮೆ-ಸೂತಕಗಳಿದ್ದರೆ ರಥ ಕಟ್ಟುವಂತಿಲ್ಲ. ರಥ ಸಿದ್ಧಪಡಿಸುವಿಕೆ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ (ಜಿಎಸ್‍ಬಿ) ದೇವಾಲಯಗಳಿಗೆ ಸಂಬಂಧಿಸಿದಂತೆ ಗುರ್ಜಿ ಸಿದ್ಧಪಡಿಸುವ ವಿಧಾನ ಭಿನ್ನವಾಗಿರುತ್ತದೆ.

ಹಿಂದೆ ಒಂದು ದೇವಾಲಯಕ್ಕೆ ರಥ ಕಟ್ಟುವವರು ಮತ್ತೊಂದೆಡೆ ರಥ ಕಟ್ಟುವಂತಿಲ್ಲ. ಯಾಕೆಂದರೆ, ಆಯಾ ದೇವಸ್ಥಾನಗಳಿಗೆ ಸಂಬಂಧಪಟ್ಟ ನಿರ್ದಿಷ್ಟ ಜಾತಿಯವರು ದೇವರ `ಚಾಕರಿ' ಎಂಬಂತೆ ರಥ ಕಟ್ಟುತ್ತಿದ್ದರು. ಆದರೆ, ಈಗ ಕೆಲಸದವರ ಕೊರತೆಯಿಂದ ವಿವಿಧ ಕಡೆಗಳಲ್ಲಿ ಒಂದು ತಂಡ ರಥ ಅಥವಾ ಗುರ್ಜಿ ಸಿದ್ಧಪಡಿಸುತ್ತದೆ.

ಗುರುಪುರದ ತಂಡ :
ಕರ್ನಾಟಕ ಕರಾವಳಿಯ ಮಂಗಳೂರು ಗುರುಪುರದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತ ಬಂದಿರುವ ವಾರ್ಷಿಕ ರಥೋತ್ಸವ, ಸಣ್ಣ ರಥೋತ್ಸವ (4 ಬಾರಿ) ಮತ್ತು ಗುರ್ಜಿ(ದಿಂಡ್) ಉತ್ಸವಗಳಿಗೆ ರಥ ಹಾಗೂ ಗುರ್ಜಿ ಸಿದ್ಧಪಡಿಸುವ ದೇವಾಡಿಗರು, ಜೋಗಿಗಳು ಮತ್ತು ಸಫಲಿಗರು ಒಳಗೊಂಡ ತಂಡವೊಂದು ಈಗ ಜಿಲ್ಲೆಯ ಅನ್ಯ ದೇವಸ್ಥಾನಗಳಲ್ಲೂ ಈ ಕೆಲಸ ಮಾಡುತ್ತಿದೆ. ಸಂಜೀವ ದೇವಾಡಿಗ, ಶಿವಪ್ಪ ದೇವಾಡಿಗ, ಚಂದು ದೇವಾಡಿಗ, ಸಂದೀಪ್ ಜೋಗಿ ಇವರನ್ನೊಳಗೊಂಡ ಗುರುಪುರದ 9 ಮಂದಿಯ ತಂಡ ಗುರುಪುರವಲ್ಲದೆ ವಾಮಂಜೂರು, ಕಡಂದಲೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಆದ್ಯಪಾಡಿಯ ಶ್ರೀ ಆದಿನಾಥೇಶ್ವರ ದೇವಸ್ಥಾನ ಮತ್ತು ಹಳೆಯಂಗಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ರಥ ಕಟ್ಟಿದರೆ, ಮಂಗಳೂರಿನ ಬಜಿಲಕೇರಿ, ಗುರುಪುರ ಮತ್ತು ಮಣ್ಣುಗುಡ್ಡೆಯಲ್ಲಿ ಗುರ್ಜಿ ಸಿದ್ಧಪಡಿಸುತ್ತದೆ. ಈ ತಂಡದ ಬಹುತೇಕ ಮಂದಿ ಗುರುಪುರ ದೇವಸ್ಥಾನಕ್ಕೆ ಸಂಬಂಧಿಸಿದ ಮನೆಗಳಲ್ಲಿ ವಾಸಿಸುತ್ತಾರೆ. ಉಳಿದವರು ಬೇರೆಡೆ ಇದ್ದಾರೆ.

ರಥ-ಗುರ್ಜಿ ಕಟ್ಟುವ ವಿಧಾನ :
ರಥ ಅಥವಾ ಗುರ್ಜಿ ಪ್ರದೇಶವಾರು ಭಿನ್ನವಾಗಿರುತ್ತವೆ. ರಥಗಳು ಸುಮಾರು 20ರಿಂದ 25 ಅಡಿ ಇದ್ದರೆ, ಗುರ್ಜಿಗಳು ಸಾಮಾನ್ಯವಾಗಿ 10ರಿಂದ 15 ಅಡಿ ಎತ್ತರವಿರುತ್ತವೆ. ಗುರ್ಜಿಗಳು ನೆಲದಲ್ಲಿ `ಸ್ಥಿರ'ವಾಗಿದ್ದು, ಎಳೆಯುವಂತಿಲ್ಲ. ರಥ ಎಳೆಯಲಾಗುತ್ತದೆ. ಗುರ್ಜಿಗೆ ನೆಲದಲ್ಲೇ ನಾಲ್ಕು ಕಂಬ(ಗನೆ) ಅಳವಡಿಸಲಾಗಿ, ಮೇಲಕ್ಕೆ ಬಿಳಿ ಮತ್ತು ಕೆಂಪು ಪತಾಕೆಗಳಿಂದ ರಥದ ಶೈಲಿಯಲ್ಲಿ ಸಿಂಗರಿಸಲಾಗುತ್ತದೆ. ರಥ ಅಥವಾ ಗುರ್ಜಿಯ ಮಧ್ಯಭಾಗದಲ್ಲಿ ಕಂಗಿನ `ತೊಲಕೆ' ಮತ್ತು ನಾಗಬೆತ್ತದ ಸಹಾಯದಿಂದ ಉರುಟಾದ ಗೂಡು ನಿರ್ಮಿಸಲಾಗುತ್ತದೆ. ಗೂಡು ಆಧರಿಸಲು ಸಲಾಕೆಗಳು ಮತ್ತು ಹೊರಗೆ ಬಿದಿರಿನ ತೊಲಕೆ ಕಟ್ಟಲಾಗುತ್ತದೆ. ಬಿದಿರಿನ ಓಟೆಗಳಿಗೆ ಪತಾಕೆ ಕಟ್ಟಲಾಗುತ್ತದೆ. ಇದರ ಮೇಲ್ಗಡೆ ಕೆಂಪು ಬಟ್ಟೆ ಹಾಸಲಾದ ಮತ್ತೊಂದು ಚಿಕ್ಕ ಗೂಡು ಹಾಗೂ ಅದರ ಮೇಲ್ಗಡೆ ಕಳಸವಿರುತ್ತದೆ. ರಥ ಅಥವಾ ಗುರ್ಜಿ ನಿರ್ಮಿಸಲು ಹೆಚ್ಚೆಂದರೆ ಏಳು ದಿನ ಬೇಕಾಗುತ್ತದೆ.

``ನಾವು ಗುರುಪುರ ಮತ್ತು ಇತರೆಡೆ ಹಲವು ವರ್ಷದಿಂದ ರಥ ಹಾಗೂ ಗುರ್ಜಿ ಸಿದ್ಧಪಡಿಸುತ್ತಿದ್ದೇವೆ. ಎಲ್ಲ ಸೊತ್ತುಗಳಿರುವ ಹೊರತಾಗಿಯೂ ಗುರ್ಜಿ ಸಿದ್ಧಪಡಿಸಲು 10,000 ರೂ ಮತ್ತು ರಥ ಸಿದ್ಧಪಡಿಸಲು 20ರಿಂದ 25 ಸಾವಿರ ರೂ ಪಡೆಯುತ್ತೇವೆ. ಈಗ ನಮ್ಮಲ್ಲೇ ಈ ಕೆಲಸ ಮಾಡುವವರ ಕೊರತೆ ಕಂಡು ಬಂದಿದ್ದು, ಬೇರೆಯವರನ್ನು ಬಳಸಿಕೊಳ್ಳುತ್ತಿದ್ದೇವೆ. ಹಿಂದೆ ರಥ ಸಿದ್ಧಪಡಿಸಿದರೆ ಆಯಿತು ಎಂಬಂತಿದ್ದರೆ, ಈಗ ರಥ ಅಥವಾ ಗುರ್ಜಿ ಒಪ್ಪ-ಓರಣವಾಗಿರಬೇಕು. ಕೆಲವು ವರ್ಷಗಳಿಂದ ಕಬ್ಬಿಣ ಗೂಡು ಹಾಗೂ ಇತರ ಸಲಕರಣೆ ಬಂದಿದ್ದು, ಕೆಲಸ ಸುಲಭವಾಗಿದೆ. ಇಷ್ಟಿದ್ದರೂ, ಸಾಂಪ್ರದಾಯಿಕ ರಥ ಕಟ್ಟುವ ಕೆಲಸಕ್ಕೆ ಈವರೆಗೆ ಬರ ಬಂದಿಲ್ಲ'' ಎಂದು ಗುರುಪುರದಲ್ಲಿ ಕಳೆದ 50 ವರ್ಷದಿಂದ ರಥ ಕಟ್ಟುತ್ತಿರುವ ಸಂಜೀವ ದೇವಾಡಿಗ(67) ಹೇಳುತ್ತಾರೆ.

``ನಾನು ಎಲೆಕ್ಟ್ರಿಶಿಯನ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರೂ, ಕಳೆದ 8 ವರ್ಷದಿಂದ ಇಲ್ಲಿನ ತಂಡದೊಂದಿಗಿದ್ದು, ಸಾಂಪ್ರದಾಯಿಕ ರಥ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಇದು ದೇವರ ಕೆಲಸ. ಇದರಲ್ಲಿ ಖುಷಿ ಇದೆ'' ಎಂದು ತಂಡದ ಯುವ ಸದಸ್ಯ ಸಂದೀಪ್ ಜೋಗಿ ತಿಳಿಸಿದ್ದಾರೆ. ಏನೇ ಇದ್ದಾಗಲೂ ರಥೋತ್ಸವದ ಸಂಭ್ರಮದ ಹಿಂದಿನ ಶಕ್ತಿಗಳಲ್ಲಿ ರಥ ಕಟ್ಟುವವರ ಶ್ರಮವಿದೆ ಎಂಬುದು ಅತಿ ಪ್ರಾಮುಖ್ಯವಾಗಿದೆ ಎಂದು ಪತ್ರಕರ್ತ ಧನಂಜಯ ಗುರುಪುರ ಸಂಶೋಧನಾತ್ಮಕವಾಗಿ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here