Tuesday 26th, September 2023
canara news

ಮಾತೃತ್ವ ಗೌರವಿಸುವುದು ಸಮಾಜದ ಕರ್ತವ್ಯ: ರಾಘವೇಶ್ವರ ಶ್ರೀ

Published On : 06 Aug 2022


ಗೋಕರ್ಣ: ಮಹಿಳೆಯ ಮಾತೃತ್ವವನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

 

 

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಮಹಿಳೆಯಾಗಿ ಹುಟ್ಟುವಾಗಲೇ ಆಕೆ ದೇವಿಯ ಸ್ವರೂಪವಾಗಿ ಹುಟ್ಟುತ್ತಾಳೆ. ಹೆಣ್ಣನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ. ಅದು ಅತ್ಯಂತ ಪಾಪದ ಕಾರ್ಯ. ಆಕೆ ಕಣ್ಣೀರು ಇಟ್ಟರೆ ಅದು ಶಾಪ. ಮಹಿಳೆ ಸಂತೋಷವಾಗಿದ್ದರೆ ಮಾತ್ರ ಶ್ರೇಯಸ್ಸು ಎಂದು ಬಣ್ಣಿಸಿದರು.

ಜಗತ್ತಿನಲ್ಲಿ ಪುರುಷ ಏನು ಬೇಕಾದರೂ ಆಗಬಹುದು; ಆದರೆ ಮಾತೆ ಆಗಲಾರ. ಆದ್ದರಿಂದ ಪುರುಷ ಸಾಧಿಸುವ ಯಾವುದೇ ಯಶಸ್ಸಿನ ಕೀರ್ತಿ ಆತನನ್ನು ಹೊತ್ತು ಹೆತ್ತು ಸಲಹಿದ ಮಾತೆಗೆ ಸಲ್ಲಬೇಕು ಎಂದು ಹೇಳಿದರು. ಆದರೆ ಮಾತೃಶಕ್ತಿಯ ಸ್ವರೂಪ ಅಡಿಗಲ್ಲಿನಂತೆ. ರಾಮನಷ್ಟು ಕೌಸಲ್ಯೆ, ಕೃಷ್ಣನಷ್ಟು ಯಶೋಧೆ ಮುನ್ನಲೆಗೆ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ತಾಯಿಯ ಋಣ ಯಾರೂ ತೀರಿಸಲಾಗದು. ಅದು ಅಗೋಚರವಾಗಿರುತ್ತದೆ. ತಾಯಿ ಎಲೆಮರೆಯ ಕಾಯಿ. ಆದಿಶಂಕರರು ಮಾತೆಯರಿಗೆ ನೀಡಿದ ಮಹತ್ವವನ್ನು ಮಾತೃಪಂಚಕದಲ್ಲಿ ಬಣ್ಣಿಸಿದ್ದಾರೆ. ತಾಯಿಯ ಹಾರೈಕೆಯ ಫಲವಾಗಿ ಮನುಷ್ಯ ಎತ್ತರಕ್ಕೆ ಬೆಳೆಯುತ್ತಾನೆ. ಆದರೆ ಪ್ರತಿಯಾಗಿ ಒಣಗಿದ ಅಕ್ಕಿಕಾಳು ಹಾಕುವ ಸ್ಥಿತಿ ನನ್ನದು ಎಂದು ಶಂಕರರು ವೇದನೆಯಿಂದ ಹೇಳಿದ್ದಾರೆ ಎಂದು ವಿವರಿಸಿದರು.

ಸ್ತ್ರೀಯರಿಗೆ ಬಾಹುಬಲ ಇಲ್ಲದಿದ್ದರೂ ಭಾವ ಬಲ ಇದೆ. ಸ್ತ್ರೀಯರಿಗೆ ಕೋಮಲತ್ವ ಇದೆ. ಅದಕ್ಕೆ ಧಕ್ಕೆ ಬರಬಾರದು. ಯಾವುದೇ ವಯೋಮಾನದ ಮಹಿಳೆಯರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದರು.ವಯಾವ ಮಕ್ಕಳೂ ಮಾತೆಯ ಬಗ್ಗೆ ಅವಜ್ಞೆ ಮಾಡಬಾರದು. ಮಾತೆಯರಿಗೆ ಕ್ಲೇಶ ಕೊಡಬಾರದು ಎಂದು ಸೂಚಿಸಿದರು.

ಮಠದ ಶಕ್ತಿ ಮಾತೆಯರು. ವ್ಯಾಸಪೂಜೆಯ ದಿನ ಇದ್ದ ಜನಸ್ತೋಮಕ್ಕಿಂತ ಹೆಚ್ಚಿನ ಮಾತೃಸ್ತೋಮ ಸೇರಿದೆ. ಶ್ರೀಮಠದ ಮಾತೃಶಕ್ತಿ ಬೆಳೆದಿರುವುದರ ಸಂಕೇತ ಇದು. ತಾಯಂದಿರು ಮಠಕ್ಕೆ ಕೊಟ್ಟ ಸ್ಪಂದನ ಅಂಥದ್ದು ಎಂದು ಬಣ್ಣಿಸಿದರು.

ಮಠದ ಪ್ರಾಣ ಮಾತೃಶಕ್ತಿಯಲ್ಲಿದೆ. ಮಠದಲ್ಲಿ ಪುರುಷರು ಮಾಡಬೇಕಾದ ಕಾರ್ಯವನ್ನು ಮಾತೆಯರು ಮಾಡುತ್ತಿದ್ದಾರೆ. ಯಾವುದೇ ಯೋಜನೆಯನ್ನು ಶ್ರೀಮಠ ನೀಡಿದರೂ, ಮಾತೆಯರು ಅದನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ. ಮಠದ ಮಾತೆಯರೆಂಬ ಪುಣ್ಯಭೂಮಿಯಲ್ಲಿ ಯಾವ ಸತ್ಕಾರ್ಯಗಳ ಬೀಜ ಬಿತ್ತಿದರೂ ಚಿನ್ನ ಬೆಳೆಯುತ್ತದೆ; ಮಾತೆಯರಿಗೆ ನೀಡಿದ ಪ್ರತಿಯೊಂದು ಯೋಜನೆಗಳನ್ನು ಮಾತೃಶಕ್ತಿ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದೆ ಎಂದು ಹೇಳಿದರು.

ಮಾತೃ ಸಮಾವೇಶ ಅಂಗವಾಗಿ ಛಾತ್ರಭಿಕ್ಷೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಇಲ್ಲಿ ಕಲಿಯುವ ವಟುಗಳಿಗೆ ಮಾತೆಯನ್ನು ಭಿಕ್ಷಾಸೇವೆ ನೆರವೇರಿಸಿದರು. ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ದೇವಿಕಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here