Friday 9th, May 2025
canara news

ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ

Published On : 06 Aug 2022   |  Reported By : media release


ಗೋಕರ್ಣ: ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ನಮ್ಮ ಜೀವನ ಹಸನಾಗುತ್ತದೆ; ನಮ್ಮ ಕೋಪ, ತೊಂದರೆಗಳಿಗೆ ನಮ್ಮ ಕರ್ಮಗಳೇ ಕಾರಣ ಎಂಬ ಭಾರತೀಯರ ಕರ್ಮ ಸಿದ್ಧಾಂತವನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಯಾರ ಮೇಲೂ ಸಿಟ್ಟು ಮಾಡಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ ಅಥವಾ ಯಾರನ್ನೂ ನಾವು ದ್ವೇಷಿಸುವುದಿಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕೋಪ ನಮ್ಮ ಬದುಕಿನಲ್ಲಿ ಗೆಲ್ಲಲು ಕಷ್ಟಸಾಧ್ಯ ಎನಿಸಿದ ಶತ್ರು ಎಂದು ಧರ್ಮರಾಯ ಹೇಳಿದ ಉಲ್ಲೇಖ ಮಹಾಭಾರತದಲ್ಲಿದೆ. ಸಿಟ್ಟನ್ನು ಗೆಲ್ಲುವುದು ಸುಲಭವಲ್ಲ; ಅದಕ್ಕೆ ಸಾಧನೆ ಬೇಕು. ವಿಶ್ವಾಮಿತ್ರನಂಥವರೂ ಕಾಮ- ಕ್ರೋಧ ಗೆಲ್ಲಲು ಪಟ್ಟ ಕಷ್ಟ ಅಪಾರ ಎಂದು ಉದಾಹರಣೆ ಸಹಿತ ವಿವರಿಸಿದರು.

ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕೇವಲ ದೇವರು ಅಥವಾ ಸಂತರಿಗೆ ಸಂಬಂಧಿಸಿದ್ದಲ್ಲ. ಜನಸಾಮಾನ್ಯರಿಗೂ ಅದು ಪ್ರಮುಖವಾಗುತ್ತದೆ. ನಾವು ತಪ್ಪು ಮಾಡುವುದು ಮನಸ್ಸಿನ ಹತೋಟಿ ಕಳೆದುಕೊಂಡಾಗ. ಆದ್ದರಿಂದ ಜೀವನ ಸರಿದಾರಿಯಲ್ಲಿ ಸಾಗಲು ನಮ್ಮ ಮನಸ್ಸಿನ ಮೇಲೆ ನಾವು ನಿಯಂತ್ರಣ ಸಾಧಿಸಬೇಕು ಎಂದು ಬಣ್ಣಿಸಿದರು.

ಸಿಟ್ಟು ನಮ್ಮ ಸಾಕು ನಾಯಿಯಂತಿರಬೇಕು. ನಮ್ಮ ನಿಯಂತ್ರಣದಲ್ಲಿದ್ದರೆ ವಿಶ್ವಾಮಿತ್ರರು ಬ್ರಹ್ಮರ್ಷಿ ಪದವಿ ಪಡೆದಂತೆ ನಾವು ಕೂಡಾ ಬದುಕಿನಲ್ಲಿ ಬಲುದೊಡ್ಡ ಸಾಧನೆ ಮಾಡಬಹುದು ಎಂದರು.

ಎಲ್ಲ ಇಂದ್ರಿಯ ನಿಗ್ರಹ ಹೊಂದಿದ ಅಹಂಕಾರದಿಂದ ಮುನಿಯೊಬ್ಬ ನದಿಮಧ್ಯದಲ್ಲಿ ನಾವೆಯಲ್ಲಿ ಘೋರ ತಪಸ್ಸು ಮಾಡುತ್ತಿದ್ದಾಗ ಮತ್ತೊಂದು ನೌಕೆ ಬಂದು ಡಿಕ್ಕಿ ಹೊಡೆದು ತಪೋಭಂಗವಾಗುತ್ತದೆ. ತಪಸ್ಸು ಕೆಡಿಸಲು ಕಾರಣರಾದವರ ಬಗ್ಗೆ ಸಿಟ್ಟಿನಿಂದ ನೋಡಿದಾಗ ಕಂಡದ್ದು ಖಾಲಿ ದೋಣಿ. ಇದು ಆ ಮುನಿಗೆ ಎರಡು ದೊಡ್ಡ ಪಾಠಗಳನ್ನು ಕಲಿಸಿತು ಎಂದು ವಿವರಿಸಿದರು.

ತಾನು ಇನ್ನೂ ಕ್ರೋಧವನ್ನು ಗೆದ್ದಿಲ್ಲ. ತಾನಿನ್ನೂ ಮನಸ್ಸನ್ನು ಗೆದ್ದಿಲ್ಲ ಎನ್ನುವುದು ಆತನ ಅರಿವಿಗೆ ಬಂತು. ಮುಂದೆ ಜೀವನದಲ್ಲಿ ಕೆರಳಿಸಿದರೂ, ಸಿಟ್ಟು ನನ್ನದು; ಎದುರು ಇರುವುದು ಖಾಲಿ ದೋಣಿ ಎನ್ನುವ ಈ ಸನ್ನಿವೇಶ ನೆನಪಾಗುತ್ತಿತ್ತು. ಇಲ್ಲಿ ಖಾಲಿ ದೋಣಿ ಎಂದರೆ ಕರ್ಮ; ಮುಂದಿರುವ ವ್ಯಕ್ತಿ ನೆಪ ಮಾತ್ರ. ನಮ್ಮ ಕರ್ಮ ನಮ್ಮನ್ನು ಸಿಟ್ಟು ಬರುವಂತೆ, ವಿಚಲಿತರಾಗುವಂತೆ ಮಾಡುತ್ತದೆ. ನಮಗಾಗುವ ತೊಂದರೆಗಳಿಗೆ ನಮ್ಮ ಕರ್ಮವೇ ಕಾರಣ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಡಿಎಫ್‍ಓ ನಾಗರಾಜ್ ನಾಯ್ಕ್ ತೊರಕೆಯವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಹೊನ್ನಾವರದ ತಾರಾ ಭಟ್ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹವನ, ಚಂಡೀ ಪಾರಾಯಣ, ನವಗ್ರಹ ಹೋಮ ಹಾಗೂ ಮಹಾ ಗಣಪತಿ ಹವನ ನಡೆಯಿತು. ಮೂರೂರು, ಮಿರ್ಜಾನ್-ಅಚವೆ, ಮೂರೂರು-ಕಲ್ಲಬ್ಬೆ, ಧಾರೇಶ್ವರ ವಲಯಗಳ ಶಿಷ್ಯಭಕ್ತರಿಂದ ಗುರುಭಿಕ್ಷಾಸೇವೆ ನೆರವೇರಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here