Friday 19th, April 2024
canara news

ವಿಶ್ವವಿದ್ಯಾಪೀಠ ವಿಶ್ವ ಬೆಳಗುವ ಕಾರ್ಯ: ರಾಘವೇಶ್ವರ ಶ್ರೀ

Published On : 15 Aug 2022   |  Reported By : media release


ಗೋಕರ್ಣ: ಶ್ರೀ ಶಂಕರಾಚಾರ್ಯರು ಹನ್ನೆರಡು ಶತಮಾನಗಳ ಹಿಂದೆ ಇಟ್ಟ ಹೆಜ್ಜೆ ಇಂದು ಅಶೋಕೆಯಲ್ಲಿ ಇಡೀ ದೇಶವನ್ನು, ವಿಶ್ವವನ್ನು ಬೆಳಗಬಲ್ಲ ವಿಶ್ವವಿದ್ಯಾಪೀಠವಾಗಿ ಅರಳುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಏಳನೇ ದಾನ- ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅಂಥ ಪುಣ್ಯಪಾದ ಸ್ಪರ್ಶದ ಈ ನೆಲ ಇಡೀ ದೇಶವನ್ನು ವಿಶ್ವವನ್ನು ಬೆಳಗುವ ವಿದ್ಯಾಪೀಠವಾಗಿ ಅರಳುತ್ತಿದೆ ಎಂದು ಬಣ್ಣಿಸಿದರು.

ದೇಶದ, ವಿಶ್ವದ ಕತ್ತಲನ್ನು ದೂರ ಮಾಡುವ ಸಂಸ್ಥೆಯಾಗಿ ವಿಶ್ವವಿದ್ಯಾಪೀಠ ಗೌರಿಶಂಕರದ ಎತ್ತರಕ್ಕೆ ಬೆಳೆಯಲಿದೆ ಎಂದು ಹೇಳಿದರು.

ಕೃತ ಅಂದರೆ ಮಾಡಿದ್ದು, ಜ್ಞ ಅಂದರೆ ಅದು ನಮಗೆ ಗೊತ್ತಿದೆ ಎಂಬ ಅರ್ಥ. ಇನ್ನೊಬ್ಬರು ಮಾಡಿದ ಉಪಕಾರದ ಸ್ಮರಣೆಯೇ ಕೃತಜ್ಞತೆ. ಸಮಾಜದಲ್ಲಿ ದಾನಿಗಳ ಸೇವೆಯನ್ನು ಗುರುತಿಸುವ, ಸ್ಮರಿಸುವ ಕಾರ್ಯ ನಿರಂತರವಾಗಿ ಮುಂದುವರಿಯಬೇಕು ಎಂದು ಆಶಿಸಿದರು.

ಅಂಟು ಮತ್ತು ನಂಟನ್ನು ಮೀರುವುದು ಬಹಳ ಕಷ್ಟ. ಮನೆ, ಸಂಸಾರ, ಕೀರ್ತಿ, ಸಂಪತ್ತು ಹೀಗೆ ಯಾವುದನ್ನು ಮೀರುವ ಪ್ರಯತ್ನ ಮಾಡಿದರೂ ವಿಫಲವಾಗುತ್ತವೆ. ಅದನ್ನು ಮೀರಿದವನು ಯೋಗಿ ಎನಿಸಿಕೊಳ್ಳುತ್ತಾನೆ. ನಿಜವಾದ ಸನ್ಯಾಸಿ ಅಂಟು- ನಂಟನ್ನು ಮೀರಿ ಬೆಳೆದಿರುತ್ತಾನೆ. ನನ್ನದು ಎಂಬ ವಸ್ತು ಅಥವಾ ಸಂಪತ್ತನ್ನು ಎನ್ನುವುದನ್ನು ನನ್ನದಲ್ಲ ಎಂಬ ಭಾವನೆಯಿಂದ, ದಾನ ಮಾಡುವುದು ಸರ್ವಶ್ರೇಷ್ಠ ಎಂದು ವಿಶ್ಲೇಷಿಸಿದರು.

ಯಾವುದೇ ಸನ್ಮಾನ ಅಥವಾ ಶ್ಲಾಘನೆಯ ಪ್ರತಿಫಲಾಪೇಕ್ಷೆ ಇಲ್ಲದೇ ಸತ್ಕಾರ್ಯಗಳಿಗೆ ದಾನ ಮಾಡುವುದು ಶ್ರೀಮಠದ ಶಿಷ್ಯಪರಂಪರೆ ನಿಜಕ್ಕೂ ಸ್ತುತ್ಯಾರ್ಹ. ಒಬ್ಬ ವ್ಯಕ್ತಿಯ ಮಾನವನ್ನು ಅಳೆದು ಅರಿಯುವುದು ಸನ್ಮಾನ; ಅವನ ಸಾಮಥ್ರ್ಯವನ್ನು ಕೀಳಂದಾಜು ಮಾಡಿದಾಗ ಅದು ಆತನಿಗೆ ಮಾಡುವ ಅವಮಾನ ಎಂದರು. ಸ್ವಯಂ ಸಂಪತ್ತನ್ನು ಸಮಾಜಕ್ಕಾಗಿ ದಾನ ಮಾಡುವುದು ಎಲ್ಲಕ್ಕಿಂತ ಶ್ರೇಷ್ಠ ಎಂದು ಬಣ್ಣಿಸಿದರು.

ಸಂಪತ್ತಿನ ಅಂಟಿನಿಂದ ಬಿಡಿಸಿಕೊಳ್ಳುವುದು ಅತ್ಯಂತ ಕಠಿಣ. ಹಣದ ಮೋಹ ಎಂದಿಗೂ ಯಾರನ್ನೂ ಬಿಡುವುದಿಲ್ಲ. ಯಾವುದೋ ಮೋಹ ನಮ್ಮನ್ನು ಆವರಿಸಿರುತ್ತದೆ. ಆ ಸಂಪತ್ತಿನ ಮೋಹದಿಂದ ಕಡಿದುಕೊಂಡು ಸದುದ್ದೇಶಕ್ಕೆ ದಾನ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಿದರು.

ಅಂಟುಗಳು ಇರುವವರೆಗೂ ಭಗವಂತ ಪ್ರಾಪ್ತನಾಗುವುದಿಲ್ಲ. ಈ ಅಂಟೇ ನಮ್ಮ ಹಾಗೂ ಭಗವಂತನ ನಡುವಿನ ಗಂಟು ಎಂದು ಬಣ್ಣಿಸಿದರು. ಭಗವಂತನ ಕಾರುಣ್ಯ ಪ್ರಾಪ್ತವಾಗಬೇಕಾದರೆ ಈ ಮೋಹದ ಅಂಟಿನಿಂದ ನಾವು ಬಿಡಿಸಿಕೊಳ್ಳಬೇಕು ಎಂದು ಸೂಚ್ಯವಾಗಿ ನೀಡಿದರು.

ಚಾತುರ್ಮಾಸ್ಯದ ಅಂಗವಾಗಿ ಪ್ರತಿಪದಾನಂದ ಕಾರ್ಯಕ್ರಮದಲ್ಲಿ ಗುರುಕುಲ ವಿದ್ಯಾರ್ಥಿಗಳು ಗೋವರ್ಧನೋದ್ಧರಣ ಎಂಬ ಬಡಗುತಿಟ್ಟು ಯಕ್ಷಗಾನವನ್ನು ಪ್ರದರ್ಶಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ನಡೆಯಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here