Wednesday 29th, May 2024
canara news

ವ್ಯಾಸರಾಯ ಬಲ್ಲಾಳ ಸಾಹಿತ್ಯ ಪ್ರಶಸ್ತಿಗೆ ಪ್ರೊ| ಹನೂರು ಹಾಗೂ ಡಾ|ಭಟ್ ಅವರು ಆಯ್ಕೆ

Published On : 23 Aug 2023   |  Reported By : Rons Bantwal


ಮುಂಬಯಿ (ಆರ್‌ಬಿಐ) ಆ.23:- ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಹೆಸರಿನಲ್ಲಿ ಪ್ರತಿವರ್ಷ ಕೊಡುವಂತೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ಈ ಚೊಚ್ಚಲ ಪ್ರಶಸ್ತಿಗೆ ಖ್ಯಾತ ಕತೆಗಾರ, ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಹಾಗೂ ಕಾದಂಬರಿ ಪ್ರಶಸ್ತಿಗೆ ಹಿರಿಯ ವಿಮರ್ಶಕ, ಸಾಹಿತಿ, ಕಾದಂಬರಿಕಾರರಾಗಿರುವ ಡಾ.ಜನಾರ್ದನ ಭಟ್ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬಲ್ಲಾಳರ ಜನ್ಮದಿನವಾದ ಡಿಸೆಂಬರ್ 1ರಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರದಾನ ಮಾಡಲಾಗುವುದು ಎಂದು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದ ಕಾರ್ಯದರ್ಶಿ ಅರವಿಂದ ಬಲ್ಲಾಳ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್.ಉಪಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

B. Janardana Bhat                   Krihna murthy Hanur

ಪ್ರೊ. ಕೃಷ್ಣಮೂರ್ತಿ ಹನೂರು:- ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಜಾನಪದ ತಜ್ಞರಾಗಿ ಹೆಸರು ಮಾಡಿದವರು. ವಿಮರ್ಶೆ, ಕತೆ, ಕಾದಂಬರಿ ಅವರ ಆಸಕ್ತಿಯ ಕ್ಷೇತ್ರಗಳು. ಅಜ್ಞಾತನೊಬ್ಬನ ಆತ್ಮಚರಿತ್ರೆ ಮತ್ತು ಕಾಲಯಾತ್ರೆ ಅವರ ಬಹುಪ್ರಸಿದ್ಧ ಕಾದಂಬರಿಗಳು. ಕತ್ತಲಲ್ಲಿ ಕಂಡ ಮುಖ, ದೇವ ಮೂಲೆಯ ಮಳೆ, ಕಳೆದ ಮಂಗಳವಾರ ಮುಸ್ಸಂಜೆ ಮೊದಲಾದ ಕತಾಸಂಕಲನಗಳು ಪ್ರಕಟಗೊಂಡಿವೆ. ಮ್ಯಾಸ ಬೇಡರು ಬುಡಕಟ್ಟು ಅಧ್ಯಯನ ಅವರ ಮಹತ್ವದ ಶೋಧ ಕೃತಿ. ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಅವರು ಪಾತ್ರರಾಗಿದ್ದಾರೆ. ಇದೀಗ ಕನ್ನಡ ಕಥಾ ಕ್ಷೇತ್ರಕ್ಕೆ ಪ್ರೊ.ಹನೂರು ಅವರು ನೀಡಿದ ಕೊಡುಗೆಯನ್ನು ಗಮನಿಸಿ ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ| ಬಿ.ಜನಾರ್ದನ ಭಟ್ :- ಡಾ| ಬಿ.ಜನಾರ್ದನ ಭಟ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು ಸರಕಾರಿ ಪ.ಪೂ. ಕಾಲೇಜು, ಬೆಳ್ಮಣ್ಣು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹೈದ್ರಾಬಾದಿನ ಸಿ.ಐ.ಇ.ಎಫ್.ಎಲ್.ನಲ್ಲಿ ಪಿ.ಜಿ.ಡಿ.ಟಿ.ಇ. ಪದವಿ, ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಪಡೆದಿದ್ದಾರೆ. ’ಉತ್ತರಾಧಿಕಾರ’ (ವರ್ಧಮಾನ ಪ್ರಶಸ್ತಿ), ’ಹಸ್ತಾಂತರ’ (ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ), ಮತ್ತು ’ಅನಿಕೇತನ’ ಕಾದಂಬರಿ ತ್ರಿವಳಿ, ’ಮೂರು ಹೆಜ್ಜೆ ಭೂಮಿ’ (ಕನ್ನಡಸಾಹಿತ್ಯ ಪರಿಷತ್ತಿನ ಭಾರತೀಸುತ ದತ್ತಿ ಪ್ರಶಸ್ತಿ), ’ಕಲ್ಲು ಕಂಬವೇರಿದ ಹುಂಬ’ (ತರಂಗ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ), ’ಬೂಬರಾಜ ಸಾಮ್ರಾಜ್ಯ’ (ಕನ್ನಡಸಾಹಿತ್ಯ ಪರಿಷತ್ತಿನ ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ), ಮತ್ತು ’ಗಮ್ಯ’ ಅವರ ಕಾದಂಬರಿಗಳು. ಅವರ ಕತೆಗಳಿಗೆ ಹಲವು ಬಾರಿ ರಾಜ್ಯಮಟ್ಟದ ಪ್ರಶಸ್ತಿ ಬಂದಿದೆ. ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಡಾ| ಬಿ. ಜನಾರ್ದನ ಭಟ್ ಅವರ ಪ್ರಕಟಿತ ಕನ್ನಡ ಕೃತಿಗಳ ಸಂಖ್ಯೆ ೮೬. ಅವರು ಸಾಹಿತ್ಯ ವಿಮರ್ಶೆಗಾಗಿ ವಿ.ಎಂ. ಇನಾಂದಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೀಗ ಕಾದಂಬರಿ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಯನ್ನು ಗಮನಿಸಿ ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here