ಉಡುಪಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರ ಚಾತುರ್ಮಾಸ ಆರಂಭ
ಮುಂಬಯಿ (ಆರ್‌ಬಿಐ) ಜು.25: ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ವಾಮನತೀರ್ಥಪೀಠದ (ಉಡುಪಿ ಶೀರೂರು ಮಠ) ಪೀಠಾಧೀಶ, ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರ ಚಾತುರ್ಮಾಸ ವೃತವು ಇಂದಿಲ್ಲಿ ಗುರುವಾರ ಮುಂಬಯಿ ಮುಲುಂಡ್ ಇಲ್ಲಿನ ಶ್ರೀ ಸತ್ಯಧ್ಯಾನ ವಿದ್ಯಾ ಪೀಠ ಉತ್ತರಾದಿ ಮಠದಲ್ಲಿ ಆರಂಭಗೊಂಡಿತು.
ಶ್ರೀ ಸಂಸ್ಥಾನದ ಪಟ್ಟದ ದೇವರು ರುಕ್ಮಿಣಿ ಸತ್ಯಭಾಮ ಸಮೇತ ವಿಠ್ಠಲ ದೇವರ ವಾರ್ಷಿಕ ಮಹಾಭಿಷೇಕ ಹಾಗೂ ಶ್ರೀಗಳ ಚಾತುರ್ಮಾಸ ಭಕ್ತಜನರ ಸಮ್ಮುಖದಲ್ಲಿ ನೆರವೇರಿತು.
ಟೀಕಾಚಾರ್ಯರ ಆರಾದನಾ ಪರ್ವಕಾಲದಲ್ಲಿ ಶ್ರೀ ಗಳು ಅರ್ಘ್ಯ ಪಾದ್ಯಾದಿಗಳನ್ನು ನೀಡಿ ಧಾರ್ಮಿಕ ವಿಧಿಗಳೊಂದಿಗೆ ಚಾತುರ್ಮಾಸ ವೃತಸಂಕಲ್ಪ ಮಾಡಿದರು. ಈ ಸಂದರ್ಭದಲ್ಲಿ ಪ್ರತಿದಿನ ಧಾರ್ಮಿಕ ಪ್ರವಚನ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಉತ್ತರಾದಿಮಠದ ಶ್ರೀ ವಿದ್ಯಾಸಿಂಹಾಚಾರ್ಯ ಹಾಗೂ ಸತ್ಯಧ್ಯಾನಾಚಾರ್ಯರಿಂದ ಸಂಸ್ಥಾನದ ಪಟ್ಟದ ದೇವರಿಗೆ ವಿಶೇಷ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ದಿವಾನ ಡಾ| ಉದಯಕುಮಾರ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.