Friday 14th, May 2021
canara news

ನವನವೀನ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಬಿಎಸ್‍ಕೆಬಿಎ-ಗೋಕುಲ

Published On : 22 Dec 2016   |  Reported By : Rons Bantwal


ಮುಂಬಯಿ, ಡಿ.22: ಒಂಬತ್ತು ದಶಕಗಳ ಹಿಂದೆ ದಕ್ಷಿಣ ಕನ್ನಡದಿಂದ ಮುಂಬಯಿಗೆ ಆಗಮಿಸಿದ ಪೂರ್ವಜರು ಮುಂಬಯಿ ದಕ್ಷಿಣ ಕನ್ನಡ ಬ್ರಾಹ್ಮಣರನ್ನೆಲ್ಲಾ ಸಂಘಟಿಸಿ, 1925ರಲ್ಲಿ ಬಿಎಸ್‍ಕೆಬಿ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಆ ಹಿರಿಯರು ಅತ್ಯಂತ ದೂರದೃಷ್ಟಿಯಿಂದ, ಸದಸ್ಯರ ಕಾರ್ಯ ಚಟುವಟಿಕೆಗಳಿಗೆ, ಸಮ್ಮಿಲನಕ್ಕೆ ಒಂದು ವೇದಿಕೆಯ ಅಗತ್ಯತೆಯನ್ನು ಕಂಡು ಅತ್ಯಂತ ಶ್ರಮಪಟ್ಟು ಒಂದು ಕಟ್ಟಡವನ್ನು ನಿರ್ಮಾಣಮಾಡಿ, ಅದಕ್ಕೆ `ಗೋಕುಲ' ಎಂಬ ಸುಂದರವಾದ ಹೆಸರನ್ನಿಟ್ಟರು.ಸದಾ ತನ್ನ ಹಸನ್ಮುಖದಿಂದ ಭಕ್ತರನ್ನೆಲ್ಲಾ ತನ್ನತ್ತ ಆಕರ್ಷಿಸುತ್ತಿ ರುವ ಮುರಳೀಧರ ಶ್ರೀ ಗೋಪಾಲಕೃಷ್ಣನ ಅಮೃತಾಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಒಂದು ಚಿರಸ್ಮರಣೀಯ ದೇಣಿಗೆಯನ್ನು ಮುಂದಿನ ಪೀಳಿಗೆಗಾಗಿ ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ಗೋಕುಲವು ಮುಂಬಯಿ ಮಹಾನಗರಿಗೆ, ದಕ್ಷಿಣ ಕನ್ನಡದಿಂದ ಆಗಮಿಸಿದ ಸಮಾಜ ಬಾಂಧವರಿಗೆ ಸ್ನೇಹ ಸಮ್ಮಿಲನದ ಸ್ಥಳವಾಗಿದೆ. ತಾಯ್ನಾಡಿನ ಹಬ್ಬ ಹರಿದಿನಗಳನ್ನು ಸಾಂಪ್ರದಾಯಕವಾಗಿ ಆಚರಿಸುವ ಧಾರ್ಮಿಕ ಸ್ಥಳವಾಗಿದೆ. ಹಿರಿಯರ ಈ ಅಮೂಲ್ಯ ದೇಣಿಗೆಯಿಂದಾಗಿ ತವರೂರಿನ ಸುಖವನ್ನು ಸದಸ್ಯರೆಲ್ಲರೂ ಗೋಕುಲದಲ್ಲಿ ಅನುಭವಿಸುತ್ತಾ ಬಂದಿದ್ದಾರೆ. ಸದಸ್ಯರ ಮಕ್ಕಳು ಮೊಮ್ಮಕ್ಕಳು ಇಲ್ಲಿ ಹಾಡಿ ಕುಣಿದು ಕುಪ್ಪಳಿಸಿ, ಹೆಸರಿಗೆ ತಕ್ಕಂತೆ ಗೋಕುಲವನ್ನು ನಂದಗೋಕುಲವನ್ನಾಗಿಸಿದ್ದಾರೆ. ಸದಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ಹಮ್ಮಿಕೊಂಡು, ಚಟುವಟಿಕೆಯಿಂದಿರುವ ಗೋಕುಲ ಮುಂಬಯಿಯಲ್ಲಿ ಮಾತ್ರವಲ್ಲ, ಊರು ಪರವೂರಿನಲ್ಲಿಯೂ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ತನ್ನ ಸದಸ್ಯರಿಗಷ್ಟೇ ಅಲ್ಲದೆ ಸುತ್ತು ಮುತ್ತಲಿನ ಹಲವಾರು ಭಕ್ತಾದಿಗಳಿಗೆ ಭಕ್ತಿಯ ನೆಲೆಯಾಗಿದೆ. ಶ್ರೀ ಗೋಪಾಲಕೃಷ್ಣ ಎಲ್ಲರ ಆರಾಧ್ಯ ದೇವರಾಗಿದ್ದಾನೆ.

ಅಂತಹಾ ಗೋಕುಲದ ಕಟ್ಟಡ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. ಅಲ್ಲಲ್ಲಿ ಸೋರುವಿಕೆಯ ಕಾರಣ ಪ್ರತಿ ವರ್ಷವೂ ದುರಸ್ಥಿ ಕಾರ್ಯಗಳನ್ನು ಮಾಡುವ, ತೇಪೆ ಹಚ್ಚುವ ಅನಿವಾರ್ಯತೆ ಬಂದೊದಗಿದೆ. ಇಂದಿನ ಆಧುನಿಕ ಜೀವನಕ್ಕೆ ತಕ್ಕಂತೆ ಹವಾ ನಿಯಂತ್ರಿತ ಸಭಾಗೃಹದ, ಸುಸಜ್ಜಿತ ಅಡಿಗೆಮನೆಯ ಕೊರತೆಯನ್ನು ನಾವು ಕಾಣುತ್ತಿದ್ದೇವೆ. ಹಿರಿಯರಿಗೆ ಅನುಕೂಲವಾಗುವಂತೆ ಲಿಫ್ಟ್ ನ ಸೌಲಭ್ಯವಿಲ್ಲ, ಆಧುನಿಕ ಶೌಚಾಲಯಗಳಿಲ್ಲ. ಗಣನೀಯವಾಗಿ ಹೆಚ್ಚುತ್ತಿರುವ ಸದಸ್ಯರ ಸಂಖ್ಯೆಗೆ ಅನುಗುಣವಾದ ಸಭಾಗೃಹದ ಕೊರತೆಯಿಂದಾಗಿ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಂಘದ ಸದಸ್ಯರೇ ತಮ್ಮತಮ್ಮ ಮನೆಯ ಕಾರ್ಯಕ್ರಮಗಳನ್ನು ಉತ್ತಮ ಸೌಲಭ್ಯಗಳಿರುವ ಇತರ ಸಭಾಗೃಹಗಳಲ್ಲಿ ಆಚರಿಸುತ್ತಾರೆ. ಗೋಕುಲಾಷ್ಟಮಿ ಅಂತಹ ಪ್ರಮುಖ ಉತ್ಸವದ ಕಾಲದಲ್ಲಿ ಮಂದಿರದಲ್ಲಿ ಕನಿಷ್ಠ 50 ಮಂದಿಗಾದರೂ ನಿಂತು ಪೂಜೆ ನೋಡುವ ಅವಕಾಶವಿರುವುದಿಲ್ಲ. ಉತ್ಸವಗಳನ್ನು ಆಚರಿಸಲು ಕೂಡಾ ಜಾಗದ ಅಡಚಣೆ. ಆಗಮಿಸುವ ಸದಸ್ಯರ ವಾಹನಗಳ ನಿಲುಗಡೆ ಸಿಗುವುದಂತೂ ತುಂಬಾ ಕಷ್ಟ. ಇಂದಿನ ಯುವ ಜನಾಂಗಕ್ಕೆ ಬೇಕಾದಂತಹ ಉತ್ತಮ ಗುಣ ಮಟ್ಟದ ವಾಚನಾಲಯ ಮತ್ತು ಇನ್ನಿತರ ಅತ್ಯಾಧುನಿಕ ಸೌಕರ್ಯಗಳಿಲ್ಲ. ಅದರ ಜೀರ್ಣೋದ್ಧಾರ ಮಾಡುವುದು ಸದಸ್ಯರ ಆದ್ಯ ಕರ್ತವ್ಯವೆಂದು ಮನಗಂಡು ಎಂಟು ವರ್ಷಗಳ ಹಿಂದೆ ಗೋಕುಲದ ನವೀಕರಣಕ್ಕೆ ಅಂದಿನ ಆಡಳಿತ ಮಂಡಳಿ ನಿರ್ಣಯಿಸಿತ್ತು. ಮಂದಿರ ತಜ್ಞರ ಸಲಹೆಯನ್ನು ಪಡೆದು ಅವರ ಸಲಹೆ, ಮಾರ್ಗದರ್ಶನದಂತೆ ಕೆಲವು ಪ್ರಾಯಶ್ಚಿತ್ತ ಪರಿಹಾರ ಕ್ರಿಯೆಗಳನ್ನು ಕೂಡಾ ಮಾಡಿತ್ತು. ಆದರೆ ಕಾರಣಾಂತರಗ ಳಿಂದ ಕೆಲಸ ಮುಂದುವರಿಸಲಾಗಲಿಲ್ಲ. ಇದೀಗ ಕಟ್ಟಡದ ಪರಿಷ್ಕರಿಸಿದ ನಕ್ಷೆ ರೂಪುರೇಷೆಗಳನ್ನು ಪುನಃ ಸಂಬಂಧ ಪಟ್ಟ ಅಧಿಕಾರಿಗಳಿಗೆ ಒಪ್ಪಿಸಿ, ಪರವಾನಿಗೆ ಪತ್ರಗಳನ್ನು ಡಾ| ಸುರೇಶ್ ಎಸ್.ರಾವ್ ಅವರ ಅಧ್ಯಕ್ಷತೆಯ ಲ್ಲಿ ಇಂದಿನ ಆಡಳಿತ ಮಂಡಳಿ ಪಡೆದುಕೊಂಡಿದೆ.

ಪರಿವರ್ತನೆ ಮಾನವನ ಜೀವನದ ಅವಿಭಾಜ್ಯ ಅಂಗ. ಕಾಲ ಬದಲಾದಂತೆ, ಆಧುನಿಕತೆಗೆ ತಕ್ಕಂತೆ ನಾವು ಬದಲಾಗಬೇಕಾಗುತ್ತದೆ. ಮುಂದಿನ ಪೀಳಿಗೆಗಾಗಿ ಗೋಕುಲದ ಪುನರ್ ನಿರ್ಮಾಣ ಮಾಡಲೇಬೇಕಾದ ಅನಿವಾರ್ಯತೆ ಬಂದಿದೆ. ಅದಕ್ಕೆ ಈಗ ಕಾಲ ಸನ್ನಿಹಿತವಾಗಿದೆ.

ನವೀನವಾಗಿ ನಿರ್ಮಾಣವಾಗುವ ಗೋಕುಲದ ಕಟ್ಟಡದಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಆಡಳಿತ ಮಂಡಳಿ ಹಾಕಿಕೊಂಡಿದೆ:
ತಳದಲ್ಲಿ ಎರಡು ಮಟ್ಟದ ಹಾಗೂ ಒಂದನೇಯ ಮತ್ತು ಎರಡನೇ ಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶವನ್ನು ಮಾಡಲಾಗುವುದು. ತಳ ಮಜಲಿನಲ್ಲಿ ಶಿಲಾಮಯ ಶ್ರೀ ಕೃಷ್ಣ ಮಂದಿರ ನಿರ್ಮಾಣವಾಗಲಿದೆ. ಉಡುಪಿಯಲ್ಲಿರುವಂತೆ ಗರ್ಭಗುಡಿ, ಗೋಪುರ, ತೀರ್ಥಮಂಟಪಗಳನ್ನೊಳಗೊಂಡ ಮಂದಿರದಲ್ಲಿ ಈಗಿರುವ ಶ್ರೀ ಗೋಪಾಲಕೃಷ್ಣನ ಸುಂದರ ಮೂರ್ತಿಯನ್ನೇ ಪ್ರತಿಷ್ಠಾಪಿಸಲಾಗುವುದು. ಈಗ ಪೂಜಾ ಸಮಯದಲ್ಲಿ ಕೇವಲ 25 / 30 ಭಕ್ತರಿಗೆ ಮಾತ್ರ ದರ್ಶನಭಾಗ್ಯ ಲಭ್ಯವಾಗುವುದಾದರೆ, ಹೊಸ ಮಂದಿರದಲ್ಲಿ ಸುಮಾರು 300 ಜನರಿಗೆ ಪೂಜೆಯನ್ನು ನೋಡಲು ಅವಕಾಶವಿರುವುದು. ಅಂತೆಯೇ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕೃಷ್ಣನ ಸಮ್ಮುಖದಲ್ಲಿಯೇ ಜರಗಲಿರುವುದು.

ಮೂರನೆಯ ಮಹಡಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಿಗಾಗಿ, ಈಗ ಇರುವುದಕ್ಕಿಂತ ಒಂದೂವರೆ ಪಟ್ಟು ದೊಡ್ಡದು ಹಾಗೂ 650 ಚದರ ಅಡಿಯ ವೇದಿಕೆಯನ್ನೊಳಗೊಂಡ ಹವಾ ನಿಯಂತ್ರಿತ ಸಭಾಗೃಹವಿರುವುದು. ನಾಲ್ಕನೆಯ ಮಹಡಿಯಲ್ಲಿ ಭೋಜನ ಶಾಲೆಯನ್ನೊಳಗೊಂಡ ಎರಡು ಬೇರೆ ಬೇರೆ ಸುಸಜ್ಜಿತ ಅಡಿಗೆ ಕೋಣೆಗಳು, ಐದನೆಯ ಮಹಡಿಯಲ್ಲಿ, ಸದಸ್ಯರ ಅಥವಾ ಇತರರ ಯಾವುದೇ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತಹ 3200 ಚದರ ಅಡಿ ವಿಸ್ತೀರ್ಣದ, ಹವಾ ನಿಯಂತ್ರಿತವಲ್ಲದ ಸಭಾಗೃಹವಿರುವುದು. ಆರನೆಯ ಮಹಡಿಯಲ್ಲಿ ಸಂಸ್ಥೆಯ ಆಡಳಿತ ಕಚೇರಿ ಮತ್ತು ಸಮಾಲೋಚನಾ ಕೊಠಡಿ (ಅoಟಿಜಿeಡಿeಟಿಛಿe ಖoom),ಮತ್ತು ವಾಚನಾಲಯ, ಏಳನೆಯ ಮಹಡಿಯಲ್ಲಿ ಅತಿಥಿಗಳಿಗಾಗಿ ಎಂಟು ಹವಾ ನಿಯಂತ್ರಿತ ಕೊಠಡಿಗಳು ಇರುವುವು. ಹಾಗೆಯೇ ದೊಡ್ಡ ತಾರಸಿ (ಖಿeಡಿಡಿಚಿಛಿe) ಕೂಡಾ ಲಭಿಸುವುದು. 4 ಲಿಫ್ಟ್ ಗಳನ್ನು ಅಳವಡಿಸಲಾಗುವುದು.

ಮಂದಿರ ತಜ್ಞರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಂಡು ಡಿಸೆಂಬರ್ 25, 2016 ರಿಂದ ಶ್ರೀ ದೇವರ ಮೂರ್ತಿಯನ್ನು ಗೋಕುಲದಿಂದ ಆಶ್ರಯಕ್ಕೆ ಸ್ಥಳಾಂತರಿಸುವರೇ ಮಾಡಬೇಕಾದ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಲು ಬಿಎಸ್‍ಕೆಬಿಎ ಸಂಸ್ಥೆ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನಿರ್ಧರಿಸಿದೆ. ಗೋಕುಲದಿಂದ ಆಶ್ರಯದ ಬಾಲಾಲಯಕ್ಕೆ ಕೊಂಡೊಯ್ಯುವ ಪ್ರಕ್ರಿಯೆಯು 2016ರ ಡಿ.31ರಂದು ಪ್ರಾತಃಕಾಲದಿಂದ ಆರಂಭವಾಗುವುದು. ಮಧ್ಯಾಹ್ನ 3 ಗಂಟೆಗೆ ಗೋಕುಲದಿಂದ ವೈಭವೋಪೇತ ಮೆರವಣಿಗೆ ಹೊರಡಲಿದೆ. ಮರುದಿನ ಹೊಸವರ್ಷದ ಮೊದಲನೆಯ ದಿನ 1/1/2017 ರಂದು ಆಶ್ರಯದ ಬಾಲಾಲಯದಲ್ಲಿ ಶ್ರೀ ಕೃಷ್ಣಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ.

ಶ್ರೀ ಕೃಷ್ಣ ಗೋಕುಲವನ್ನು ಬಿಟ್ಟು ದ್ವಾರಕೆಗೆ ತೆರಳುವಾಗ ನಂದಗೋಕುಲದ ಗೋಪ-ಗೋಪಿಯರಿಗಾದ ದುಃಖ ದುಮ್ಮಾನದಂತೆ, ಸದಸ್ಯರೆಲ್ಲರಿಗೆ, ಭಕ್ತಾದಿಗಳಿಗೆ ಈ ಸಂದರ್ಭದಲ್ಲಿ ದುಃಖವಾಗುವುದು ಸಹಜವಾದ ರೂ, ಭವಿಷ್ಯದಲ್ಲಿ, ಭವ್ಯನವ್ಯ ಕಟ್ಟಡದಲ್ಲಿ ವಿರಾಜಿಸಲಿರುವ ಶ್ರೀ ಕೃಷ್ಣನನ್ನು ಮನದಲ್ಲಿಯೇ ಕಲ್ಪಿಸಿಕೊಂಡು, ಆತನನ್ನು ಪುನಃ ಗೋಕುಲಕ್ಕೆ ಅದ್ದೂರಿಯಾಗಿ ಸ್ವಾಗತಿಸುವ ಸೌಭಾಗ್ಯ, ಆ ಶುಭದಿನ ಶೀಘ್ರವಾಗಿ ಬರಲಿ ಎಂದು ಆತನ ದಿವ್ಯ ಮಂಗಳಮೂರ್ತಿಯನ್ನು ಹೃದಯದಲ್ಲಿಟ್ಟುಕೊಂಡು, ಸದಸ್ಯರೆಲ್ಲರೂ ಆತನನ್ನೇ ಹೃತ್ಪೂರ್ವಕವಾಗಿ ಬೇಡಿಕೊಳ್ಳುತ್ತಿದ್ದಾರೆ. ಸಂಘದ ಎಲ್ಲಾ ಯೋಜನೆಗಳು ಯಾವ ಅಡೆ ತಡೆಗಳಿಲ್ಲದೆ ಸುಸೂತ್ರವಾಗಿ ಕಾರ್ಯಗತವಾಗಲು, ಎಲ್ಲರ ಪೂರ್ಣ ಸಹಕಾರದೊಂದಿಗೆ ಭಗವದನುಗ್ರಹಕ್ಕಾಗಿ ತುಂಬು ಹೃದಯದಿಂದ ಪ್ರಾಥಿರ್üಸಿಕೊಳ್ಳುತ್ತಿದ್ದಾರೆ. ಭಕ್ತಾದಿಗಳೆಲ್ಲಾ ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಬೇ ಕಾಗಿ ವಿನಂತಿಸಿಕೊಂಡಿದ್ದಾರೆ.

 
More News

 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ

Comment Here