Saturday 20th, April 2024
canara news

ಗೋರೆಗಾಂವ್ ಕರ್ನಾಟಕ ಸಂಘದ ನ್ಯಾಯದ ತಿಮಿರ ಗೋಷ್ಠಿ

Published On : 24 Dec 2016   |  Reported By : Ronida Mumbai


ವ್ಯಕ್ತಿ ಶಕ್ತಿಯಾಗಿ ನ್ಯಾಯಪರ ಧ್ವನಿಯಾಗುವುದೇ ಮನುಷ್ಯತ್ವ: ಗಣೇಶ್ ಕುಮಾರ್

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಡಿ.24: ಗೋರೆಗಾಂವ್ ಕರ್ನಾಟಕ ಸಂಘವು ತನ್ನ ನವನೋಟ ಕಾರ್ಯಕ್ರಮಾಂತರ್ಗತ ನ್ಯಾಯದ ತಿಮಿರ ಗೋಷ್ಠಿಯೊಂದನ್ನು ವಿಶಿಷ್ಟ ರೀತಿಯಲ್ಲಿ; ಗೋರೆಗಾಂವಿನ ಕೇಶವ ಗೋರೆ ಸಭಾಗೃಹದಲ್ಲಿ ಇತ್ತೀಚೆಗೆ ನವನೋಟದ ಭಾಗವಾಗಿ ಸಂಯೋಜಿಸಿತ್ತು. ಇಲ್ಲಿ ಸಮಕಾಲಿನ ಜ್ವಲಂತ ಸಮಸ್ಯೆಗಳ ಕುರಿತು ಮೌನ ಮಾತಾಯಿತು.

ನಮ್ಮ ಮುಂದೆ ಇಂದಿನ ದಿನಗಳಲ್ಲಿ ನ್ಯಾಯಪಾಲಿಕೆಯ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿದೆ. ಅದು ತುಟಿಮೀರಿದ ಹಲ್ಲು ಎಂದು ಒಂದೆಡೆ ಅದರ ವಿರೂಪಕತೆಯ ಕುರಿತು ವಾಗ್ವದ ಎದ್ದಿದೆ. ಇನ್ನೊಂದೆಡೆ ನಾವು ನ್ಯಾಯದೇವತೆಯ ಕಣ್ಣಿನಲ್ಲಿ ಎಲ್ಲರೂ ಸಮಾನರೆಂಬ; ಕಣ್ಣಿಗೆ ಬಟ್ಟೆಕಟ್ಟಿ ತಕ್ಕಡಿ ತೂಗುವ ಸ್ತ್ರೀ ತತ್ವದ ಮಾತೃ ಛಾಯೆಯಲ್ಲಿ ವಿಶ್ವಾಸವಿರಿಸಿದವರು ಎಂದು ಹೇಳುವವರಿದ್ದಾರೆ. ಇದಕ್ಕೆ ಭಿನವಾಗಿ ನ್ಯಾಯಪಾಲಿಕೆಯಲ್ಲಿ ಇನ್ನೇನೂ ಇಲಸಲ್ಲದ್ದು ನಡೆಯುತ್ತಿಲ್ಲ ಎಂದು ಅದರ ಸಮರ್ಥಕರು ತುತ್ತೂರಿ ಉದುತ್ತಾರೆ.

ಹೀಗಿದ್ದೂ ನಮ್ಮ ನಡುವಿರುವ ಈ ದೇಶದ ಕಟ್ಟ ಕಡೆಯ ಮನುಷ್ಯನಿಗೂ ಗಾಂಧೀಜಿ ಬಯಸಿದ ಅಂಬೇಡ್ಕರ್ ಆಶಿಸಿದ ನ್ಯಾಯ ದೊರೆಯುತ್ತಿದೆಯೇ? ಇದು ಒಂದು ಯಕ್ಷ ಪ್ರಶ್ನೆಯೇ ಆಗಿ ಇಂದಿಗೂ ಉಳಿದುಕೊಂಡಿದೆ.

ನಮ್ಮಲ್ಲಿ ನ್ಯಾವಪರತೆಯನ್ನು ಕಂಡುಕೊಳ್ಳುವ ಮತ್ತು ಅದನ್ನೇ ಕೊಂಡುಕೊಳ್ಳುವ ದ್ವಿಮುಖ ಸಂಚಲನೆಯ ಬಗ್ಗೆಗೂ ವಾಗ್ವದವಿದೆ. ಇಲ್ಲಿ ಢಕಾಯಿತರು ನಿರ್ಭಿಡೆಯಿಂದ ಸಂಚರಿಸುತ್ತ್ತಾರೆ. ಸಣ್ಣಪುಟ್ಟ ಕಳ್ಳರು ಮಾತ್ರ ಕಾರಾಗೃಹದಲ್ಲಿ ಕೊಳೆಯುತ್ತಾರೆ ಎಂಬ ವಿಡಂಬನೆಯ ಮಾತೂ ಕೇಳಿಬರುತ್ತದೆ. ಇಂತ ಸಂಕ್ರಮಣ ಕಾಲದಲ್ಲಿ ಚರಿತ್ರೆಯತ್ತ ಮುಖಮಾಡುತ್ತಾ ಕರಾವಳಿ ಕರ್ನಾಟಕದ ಭಾಗವಾಗಿರುವ ತುಳುವರ ಮೌಖಿಕ ಇತಿಹಾಸದ ಒಡಲಲ್ಲಿ ಇರುವ; ಅದರಲ್ಲೂ ನ್ಯಾಯಪರತೆಯ ಮರುಸ್ಥಾಪನೆಗಾಗಿ ದುಷ್ಟತೆಯ ಜೇನಗೂಡಿಗೆ ಬೆಂಕಿ ಹಚ್ಚಿ; ಅಲ್ಲಿಂದ ಸಮಾನತೆಯ ಮಧುತೆಗೆದು ಸಮುದಾಯಕ್ಕೆ ಹಂಚಿದ ನಾಲ್ಕು ಮಂದಿ ಪ್ರಾಚೀನರಿದ್ದಾರೆ. ಅವರು ವೀರತ್ವದ ಸಕಾರ ಮೂರ್ತಿಯಂತಿರುವ ಸ್ತ್ರೀಯರ ಬಹುಕಿನ ಬಗ್ಗೆ ಮತ್ತು ಅವರಿತ್ತ ಮಾನವಪರ ಸಂದೇಶದ ಬಗ್ಗೆ ನ್ಯಾಯಯದ ತಿಮಿರದಲ್ಲಿ ಚಾಲನೆ ದೊರೆಯಿತು.

ಆರಂಭದಲ್ಲಿ ನ್ಯಾಯದ ತಿಮಿರ ಗೋಷ್ಠಿಯ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನಿನ ಗೌ| ಪ್ರ| ಕಾರ್ಯದರ್ಶಿ ಗಣೇಶ್ ಕುಮಾರ್ ಮಾತನಾಡಿದರು. ಶ್ರೀಯುತರು ಮನುಷ್ಯರಾಗಿ ಹುಟ್ಟಿದವರು ಯಾರೇ ಇರಲಿ; ಅವರು ಸಾಧನೆ ಮಾಡಿದಾನ ಅವರು ಕೇವಲ ವ್ಯಕ್ತಿಯಾಗದೆ ಶಕ್ತಿಯಾಗುತ್ತಾರೆ. ಇಂತ ಶಕ್ತಿಗಳು ಅಸಮಾನತೆಯ ವಿರುದ್ಧ, ಅಮಾನುಷತೆಯ ವಿರುದ್ಧ ಹೋರಾಡುತ್ತಾರೆ. ನವ ನೋಟ ಎಂದರೆ ಇಂತಹ ಹೊಸ ನೋಟವಿರಬದು. ಇದನ್ನೆ ಇನ್ನೊಂದು ಅರ್ಥವೂ ಇದೆ. ನವ ಎಂದರೆ ಒಂಬತ್ತು. ಇದು ದೊಡ್ಡದರ ಧ್ವನಿಯೂ ಹೌದು. ಗಣಿತದಲ್ಲಿ ಇದು ದೊಡ್ಡ ಸಂಖ್ಯೆ. ಆಷ್ಟೇ ಏಕೆ ಎಂಟು ದಿಕ್ಕುಗಳ ಜೊತೆ ಹೊಸ ದೃಷ್ಠಿಯನ್ನು ಬೀರುವುದೇ ಇನ್ನೊಂದು ನೋಟವೇ ನವನೋಟವೂ ಆಗುತ್ತದೆ ಎಂಬತ್ತ ಬೆಳಕು ಚೆಲ್ಲಿದರು.

ಈ ಗೋಷ್ಠಿಯಲ್ಲಿ ಯಕ್ಷಗಾನ ಭಾಗವತರೂ; ರಂಗಕಲಾವಿದೆಯೂ ಆದ ಸುಮಂಗಲ ಜಿ ಶೆಟ್ಟಿ ಅವರು ಪ್ರಗತಿಪರ ಬಂಡಾಯದ ತನ್ನಿಮಾನಿಗಳ ಕುರಿತು ಮೊದಲ ಉಪನ್ಯಾಸ ನೀಡಿದರು. ಅದರಲ್ಲಿ ಅವರು ಇತಿಹಾಸಕ್ಕೆ ಎರಡು ಮುಖಗಳಿವೆ. ಒಂದು ಜಾನಪದ ಇತಿಹಾಸ. ಇನ್ನೊಂದು ಅಕ್ಷರಸ್ಥ ಇತಿಹಾಸ. ನಮ್ಮ ತಣ್ಣಿಮಾನಿಗ ಊಳಿಮಾನ್ಯ ಅಮಾನುಷ ವ್ಯವಸ್ಥೆ ವಿರುದ್ಧ ಸೆಟೆದು ನಿಂತ ಹೆಣ್ಣು. ಈಕೆ ಮೋಸಕ್ಕೆ ಬಲಿಯಾಗಿ ಸಾವಿನ ಅಂಚಿನಲ್ಲಿದ್ದ ಅಪ್ರತಿಮ ಕೌಶಲ್ಯದ ಕೋರ್ದಬ್ಬುವಿಗೆ ಜೀವದಾನವಿತ್ತ ವೀರ ನಾರಿ. ಹಾಗಿದ್ದೂ ತನ್ನ ಸೀರೆಯ ಸೆರಗು ಹಿಡಿದು ಕೆಳಗ ನೋಡುತ್ತಾ ಬಾವಿಯಿಂದ ಮೇಲೆ ಬರಬೇಕೆಂಬ ಮಾತಿಗೆ ತಪ್ಪಿದಾಗ ಆತನಿಗೂ ತುಳುವರ 16 ಮೂಲಸ್ಥಾನಕ್ಕೆ ಸಂಕೇತವಾಗಿ ಹದಿನಾರು ಗೆರೆಗಳಿಗೆ 16 ಬಿಂದು ತನ್ನ ಹಣೆಯ ರಕ್ತ ತರ್ಪಣ ನೀಡಿಸಿದ ನ್ಯಾಯಪರ ಶಿಸ್ತಿನ ದಿಟ್ಟ ಹೆಣ್ಣು ಎಂದು ವಿವರಣೆ ನೀಡಿದರು.

ಸಮಾಜಪರ ಚಿಂತನೆಯ ಸಂಘಟಕ ಜಿ. ಹಳೆಯಂಗಡಿ ಅವರು ಸಮಾನತೆಯ ಗುಡುಗು ಮಾಯಂದಾಲ್ ಬಗ್ಗೆ ಚಿಂತನೆ ನಡೆಸಿದರು. ತುಳು ನಾಡಿನಲ್ಲಿಪ್ರಾಚೀನವಾಗಿದ್ದ ಮಾತೃಪ್ರಧಾನ ವ್ಯವಸ್ಥೆಗೆ ಸಡ್ಡು ಹೊಡೆದು; ಪುರುಷಾಧಿಕಾರದ ಅಳಿಯ ಸಂತಾನ ಕಟ್ಟಿಗೆ ಸವಾಲಾದವ ಆಲಿ ಬಾಲಿ ನಾಯಗ. ಆತನನ್ನು ಮಣಿಸಲು ಪಾಂಗೊಲ್ಲ ಬನ್ನಾರ ಎಂಬವನ ಕನಸಿನ ಭೂತದ ಕೋಲಕ್ಕೆ ಮನೆ ಮನೆಯಿಂದ ಕಾಣಿಕೆ ಕೇಳಿದಾಗ ಅದನ್ನು ತಿರಸ್ರ್ಕರಿಸಿದ ನಾಯಗನ ಸೋದರ ಸೊಸೆ ಬಾಣಂತಿ ಮಾಂಯಂದಾಲ್ ಅತ್ತ ತಿರುಗಿ ಆಕೆಯ ನವಜಾತ ಶಿಶು ಬಾಲಮ್ಮನನ್ನು ಕದ್ದು ಕಾಡಿದ ಪಾಂಗೊಲ್ಲನಿಗೆ ಮಲೆತು ಬುದ್ಧಿಕಲಿಸಿದ ಜಾನಪದ ಧೀರೆ ಮಾಯಂದಾಲ್ ಅವಳ ಸಮಾಜಮುಖಿ ಚಿಂತನೆಯ ಯಾವಕಾಲಕ್ಕೂ ಚಿಂತನಾರ್ಹ ಎಂದು ಕತೆಯ ತಾತ್ವಿಕತೆಗೆ ಹೊಸ ಬೆಳಕು ಚೆಲ್ಲಿದರು.

ಸಂಘಟಕಿ ರಂಜನಿ ರಮೇಶ್ ಮೊೈಲಿ ಅಮಾನುಷತೆಗೆ ಸಿಡಿದ ಕಲ್ಲುಟ್ಟಿಯ ವೀರ ಗಾಥೆಯ ಸಂದೇಶವನ್ನು ವಿವರಿಸುತ್ತಾ ತನ್ನ ಶಿಲ್ಪಿ ಅಣ್ಣನನ್ನು ಅಮಾನುಷವಾಗಿ ವಿಕಲಾಂಗನನ್ನಾಗಿಸಿದ ಕಾರ್ಕಳದ ದೊರೆಯನ್ನು ಒಂದು ಕೈಯಲ್ಲಿ ಬೆಂಕಿ ಇನ್ನೊಂದು ಕೈಯಲ್ಲಿ ಕಲ್ಲು ಹಿಡಿದು ಅರಮನೆಯನ್ನೂ, ಪೇಟೆಯನ್ನೂ ಸುಟ್ಟು ಕರಕಲಾಗಿಸಿದ ಸನ್ನಿವೇಶದ ಹಿಂದಿನ ಕಾರ್ಮಿಕ ಘನತೆಯ ಮಾನಬಿಂದು ಕಲ್ಲುಟ್ಟಿ ಎಂದರು. ಆಕೆ ಕೈಯಲ್ಲಿ ನಾಗ ಬೆತ್ತ ಹಿಡಿದು ಕಾರ್ಕಾಳದ ಬೀದಿಯಲ್ಲಿ ದುಷ್ಟರನ್ನು ಬೆನ್ನತ್ತಿದ ಸಮಾಜ ಶಿಕ್ಷಕಿ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕೊನೆಗೆ ಮಹಿಳಾ ಸ್ವಾಭಿಮಾನದ ಸಿರಿಯ ಒಲವು ನಿಲುವಿನ ಬಗ್ಗೆ ಉದಯೋನ್ಮುಖ ಲೇಖಕಿ ಸುಗಂಧಿ ಶ್ಯಾಮ್ ಹಳೆಯಂಗಡಿ ಅವರು ಮಾತನಾಡಿದರು. ಅವರು ಸಿರಿ ಚರಿತ್ರೆಯ ಕಾಲದಲ್ಲಿ ಸ್ತ್ರೀ ಸ್ವಾಭಿಮಾನಕ್ಕಾಗಿ ಸಿಡಿದು ನಿಂತ ಹೆಣ್ಣು. ಈಕೆ ಸ್ತ್ರೀಯರ ಶೀಲ ಪಾರಮ್ಯದ ಒಳಗೆನೆ ಇತಿಹಾಸ ಕಟ್ಟುವ ಹುಸಿತನವನ್ನು ಪ್ರಶ್ನಿಸಿದ ಅಪ್ರತಿಮ ಧೈರ್ಯಶಾಲಿ. ತನ್ನ ಮೊದಲ ಪತಿಯ ಲಂಪಟತೆಗೆ ಸಿಡಿದು ವಿಚ್ಛೇದನ ನೀಡಿ ಆಕಾಶಕ್ಕೆ ಹೊಗೆ, ನೆಲಕ್ಕೆ ಬೂದಿ ಎಂದು ಮನಸ್ಸಿನ ಬೇಗುದಿಗೆ ಶಾಪವಾಗಿ ಸಿಡಿದವಳು. ಅಂದಿನ ಕಾಲದಲ್ಲೇ ಮರುಮದುವೆಗೆ ಮನಮಾಡಿದ ಧೀರೆ. ಸ್ತ್ರೀಯರಿಗೂ ತಮ್ಮ ಹಿರಿಯರ ಆಸ್ತಿಯಲ್ಲಿ ಹಕ್ಕಿದೆ ಎನ್ನುವ ಸಿರಿಯ ಹಕ್ಕೊತ್ತಾಯ ಇಂದಿಗೂ ಕಾನೂನಿನ ಕಕ್ಷೆಯಿಂದ ತಪ್ಪಿಕೊಳ್ಳುತ್ತಾ ಸ್ತ್ರೀಯರಿಗೆ ಹೇಗೆ ಅನ್ಯಾಯವಾಗುತ್ತಿದೆ ಎನ್ನುವುದನ್ನು ವಿವರಿಸಿದರು. ಗ್ರಂಥಾಯನದ ಹೇಮಾ ಸದಾನಂದ ಅಮೀನ್ ಗೋಷ್ಠಿಯ ಸಂಚಾಲನೆಯನ್ನು ನಿರ್ವಹಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here