Thursday 28th, March 2024
canara news

ಗುರುವರ್ಯರ ತತ್ವಾದರ್ಶ ಅನುಷ್ಠಾನವೇ ಪರಮೋಚ್ಛ ಗುರಿ

Published On : 08 Dec 2020


ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದಿಂದ `ಸಮುದಾಯ ಭವನ' ನಿರ್ಮಾಣ

ಬರೆಹ : ಧನಂಜಯ ಗುರುಪುರ

ಬ್ರಹ್ಮಶ್ರೀ ನಾರಾಯಣ ಗುರುಗಳ ಪರಮೋಚ್ಛ ತತ್ವಾದರ್ಶ, ಸಂದೇಶಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸುಮಾರು 60 ಸಂವತ್ಸರಗಳ ಹಿಂದೆ ಬಿಲ್ಲವ ಸಮಾಜದ ಹಿರಿ-ಕಿರಿಯರು ಒಂದೆಡೆ ಕಲೆತು, ಸುದೀರ್ಘ ಸಮಾಲೋಚನೆ ನಡೆಸಿದ ಫಲವಾಗಿ ಗುರುಪುರದಲ್ಲಿ ಸ್ಥಾಪನೆಯಾದ `ಬಿಲ್ಲವ ಸಮಾಜ ಸೇವಾ ಸಂಘ'ವು ಅಂದಿನಿಂದ ಇಂದಿನವರೆಗೂ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಚಿಂತನಾತ್ಮಕ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ವರ್ಷಗಳ ಬಳಿಕ ಒಂದೆಡೆ ಗಟ್ಟಿಯಾಗಿ ನೆಲೆನಿಂತು ಸಮಾಜ ಬಾಂಧವರ ಕಷ್ಟ-ಸುಖಗಳೊಂದಿಗೆ ವ್ಯವಹರಿಸಲು ಅಗತ್ಯವಿರುವ ಸ್ವಂತ ಕಟ್ಟಡ(ಗುರು ಮಂದಿರ) ಹೊಂದಿರುವ ಸಂಘಕ್ಕೆ ಪ್ರಸಕ್ತ ಕಾಲಮಾನಕ್ಕನುಗುಣವಾಗಿ ಸುಸಜ್ಜಿತ `ಸಮುದಾಯ ಭವನ' ಅವಶ್ಯವೆನಿಸಿದ್ದು, ಈ ನಿಟ್ಟಿನಲ್ಲಿ ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದ ಸರ್ವ ಸದಸ್ಯರು ಸಾಧ್ಯವಿರುವ ಎಲ್ಲ ವಲಯಗಳತ್ತ ದೃಷ್ಟಿ ಹರಿಸಿ, ಹಿಡಿದ ಕಾರ್ಯ ಪೂರ್ಣಗೊಳಿಸುವ ಏಕೈಕ ಗುರಿ ಹೊಂದಿದ್ದಾರೆ. ಸಮಾಜದ ಮಕ್ಕಳ ಶಿಕ್ಷಣ, ಕಷ್ಟದಲ್ಲಿರುವ ಕುಟುಂಬಗಳಿಗೆ(ಮದುವೆ ಇತ್ಯಾದಿಗೆ) ಸಹಾಯ, ಚಿಕಿತ್ಸೆಗೆ ನೆರವು, ಪ್ರತಿಭೆಗಳ ಗುರುತಿಸಿ ಪ್ರೋತ್ಸಾಹ ನೀಡುವುದು, ಧಾರ್ಮಿಕ ಚಟುವಟಿಕೆ...ಇವೇ ಮೊದಲಾದ ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಸಂಘವು, ಬಿಲ್ಲವ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಇಂತಹದೊಂದು ವಿಶಿಷ್ಟವೂ ಅನನ್ಯವೂ ಆದಂತಹ ಉದ್ದೇಶ ಹೊಂದಿರುವ ಸಂಘದ ಬಹುದಿನಗಳ ಕನಸುಸೊಂದು ನನಸಾಗಿಸುವಲ್ಲಿ ಸರ್ಕಾರ ಮತ್ತು ಸಮಾಜದ ಹಿತಚಿಂತಕರ ಕೊಡುಗೆ ಬಹಳಷ್ಟಿದೆ ಎಂಬುದು ತಮಗೆಲ್ಲರಿಗೂ ಈಗಾಗಲೇ ಮನವರಿಕೆಯಾಗಿರಬಹುದು.

ಸಂಘದ ಬೆಳವಣಿಗೆ :
ಸುಮಾರು 59 ವರ್ಷಗಳ ಹಿಂದೆ ಅಂದರೆ, 1960ರಲ್ಲಿ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬಿಲ್ಲವ ಬಾಂಧವರೆಲ್ಲ ಸೇರಿ, ಚರ್ಚಿಸಿದ ಫಲವಾಗಿ `ಬಿಲ್ಲವ ಸಮಾಜ ಸೇವಾ ಸಂಘ' ಉದಯಿಸಿತು. ಭಂಡಾರಮನೆ ದಿ. ಸಂಕಪ್ಪ ಪೂಜಾರಿ, ದಿ. ಬೆಜ್ಜಬೆಟ್ಟು ದಾಸು ಪೂಜಾರಿ, ದಿ. ಗುಡ್ಡುಹಿತ್ಲು ಬಾಬು ಕುಂದರ್, ಭಂಡಾರಮನೆ ತಿಮ್ಮ ಪೂಜಾರಿ ಸಂಘದ ಆಗಿನ ಆಧಾರಸ್ತಂಭಗಳಾಗಿದ್ದರು. ಒಂದು ಹಂತದಲ್ಲಿ ಉತ್ತಮ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ಸಂಘ, 1964ರಿಂದ 1976ರವರೆಗೆ 12 ವರ್ಷ ಸ್ತಬ್ಧಗೊಂಡಿತ್ತು. ಆದರೆ ಈ ಅವಧಿಯಲ್ಲಿ ಸಮಾಜದ ಏಳ್ಗೆಗಾಗಿ ಕೆಲಸ ಮಾಡಬೇಕೆಂಬ ಗುರುಪುರ ಬಿಲ್ಲವ ಮನಸ್ಸುಗಳಿಗೆ ಬರ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲೇ ಎಸ್ ನಾರಾಯಣ ಪೂಜಾರಿ ಕುಲವೂರು, ಗುಡ್ಡುಹಿತ್ಲು ದಿ. ಬಾಬು ಕುಂದರ್ ನಾಯಕತ್ವದಲ್ಲಿ ಸಂಘ ಮತ್ತೆ ಸಕ್ರಿಯಗೊಂಡಿತು. 1979ರಲ್ಲಿ ಗುರುಪುರ ಅಹಲ್ಯಾವನದಲ್ಲಿ ಖರೀದಿಸಲಾದ 47 ಸೆಂಟ್ಸ್ ಜಾಗದಲ್ಲಿ ಸಂಘವು, 1981ರಲ್ಲಿ ಗುರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ, 1983ರಲ್ಲಿ ಮಂದಿರ ಕಾರ್ಯಗತಗೊಳಿಸಿತು. 2010ರಲ್ಲಿ ಸಂಘವು ಸುವರ್ಣ ಮಹೋತ್ಸವ ಆಚರಿಸಿತು. ಅಂದಿನಿಂದ ಇಂದಿನವರೆಗೆ ಸಂಘವು ಗುರು ಮಂದಿರದಲ್ಲಿ ನಾರಾಯಣ ಗುರುಗಳ ತತ್ವಾದರ್ಶ, ಸಂದೇಶಗಳಿಗೆ ಅನುಸಾರವಾಗಿ ಸ್ಥಳೀಯ ಬಿಲ್ಲವ ಬಂಧುಗಳ ಕುಂದುಕೊರತೆಗಳಿಗೆ ಸ್ಪಂದಿಸುತ್ತ ಬಂದಿದೆ. ಸಂಘದ ಜೀರ್ಣೋದ್ಧಾರ ಕೆಲಸಗಳಿಗೆ ಅಂದಿನ ಸಂಸದರು, ಶಾಸಕರ ನಿಧಿಯಿಂದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಯವರಿಂದ ಸಹಾಯಧನ ಲಭಿಸಿರುತ್ತದೆ.

ಸ್ಪೂರ್ತಿ ಬಿಲ್ಲವ
ಮಹಿಳಾ ಮಂಡಲ :

ಸಂಘವು ಕಾಲಕಾಲಕ್ಕೆ ವಿಭಿನ್ನ ಮಜಲುಗಳಲ್ಲಿ ತನ್ನ ಸೇವೆ ವಿಸ್ತರಿಸಿಕೊಂಡು ಬಂದಿದೆ. ಈ ಹಂತದಲ್ಲಿ ಸಂಘದ ಅಂಗಸಂಸ್ಥೆಯಾಗಿ ಸ್ಪೂರ್ತಿ ಬಿಲ್ಲವ ಮಹಿಳಾ ಮಂಡಲ ಹುಟ್ಟಿಕೊಂಡಿತು. ಈ ಮೂಲಕ ಮಹಿಳೆಯರಿಗೆ ಆದ್ಯತೆ ನೀಡುವುದರೊಂದಿಗೆ ಅವರಿಂದಲೂ, ಸಂಘದ ಆಶೋತ್ತರಗಳಿಗೆ ತಕ್ಕುದಾದ ಸೇವೆ ಪಡೆಯುವಂತಾಗಿದೆ.
ಸಂಘದ ಅದಮ್ಯ ಕಾಳಜಿ :

ಸಂಘವು ಹಿಂದಿನಿಂದಲೂ ಸಮಾಜದ ಮಕ್ಕಳ ಶೈಕ್ಷಣಿಕ ಹಾಗೂ ಬಡವರ ಕಣ್ಣೊರೆಸುವ ಕೆಲಸ ಮಾಡುತ್ತ ಬಂದಿದೆ ಎನ್ನಲು ಹೆಮ್ಮೆ ಎನಿಸುತ್ತಿದೆ. ಆಕಸ್ಮಿಕ ಸಂದರ್ಭಗಳಲ್ಲಿ ನೊಂದ ಕುಟುಂಬಗಳಿಗೆ ನೆರವಿನ ಹಸ್ತ ಚಾಚಲಾಗಿದೆ. ದಿ. ಸುಧಾಕರ ಅಮೀನ್ ಅವರು ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಸಂಘದ ಸರ್ವತೋಮುಖ ಬೆಳವಣಿಯೊಂದಿಗೆ, ಸಮಾಜ ಬಾಂಧವರ ಕಷ್ಟ-ಸುಖಗಳಿಗೆ ಸ್ಪಂದಿಸುವಂತಹ `ಗುರುಶ್ರೀ' ನಿಧಿ ರಚಿಸಲಾಗಿ, ಅದರಿಂದ ಬಂದ ಬಡ್ಡಿ ಹಣದಿಂದ ವಿಭಿನ್ನ ಸೇವಾ ಕಾರ್ಯ ನೆರವೇರಿಸಲಾಗಿದೆ. ಇದೇ ವೇಳೆ, 2014ರಲ್ಲಿ ಸಂಘವು ಬಿಲ್ಲವ ಮಕ್ಕಳಿಗೆ ಸ್ಕಾಲರ್‍ಶಿಫ್ ಯೋಜನೆ ಆರಂಭಿಸಿತು.

ಸಂಘದ ಕಾರ್ಯಚಟುವಟಿಕೆ, ಸೇವಾ ಕಾರ್ಯಗಳು ಮತ್ತು ಲೆಕ್ಕಪತ್ರವು ಪಾರದರ್ಶಕವಾಗಿದ್ದು ಈ ನಿಟ್ಟಿನಲ್ಲಿ, ಅಂದಿನಿಂದ ಇಂದಿನವರೆಗೂ ಅವಿರತ ಶ್ರಮಿಸುತ್ತಿರುವ ಬಳ್ಳಿ ಚಂದ್ರಶೇಖರ, ದೇವದಾಸ ಅಂಚನ್ ಹಾಗೂ ಇತರ ಹಿರಿ-ಕಿರಿಯ ಬಂಧುಗಳ ಸೇವಾ ಮನೋಭಾವ ಮರೆಯುವಂತಿಲ್ಲ.

ಸಮುದಾಯ ಭವನ ನಿರ್ಮಾಣ :

ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ ಅರ್ಥಾತ್ ಗುರು ಮಂದಿರದ ಪಕ್ಕದಲ್ಲೇ ಆವೃತವಾಗಿದ್ದ ಬೃಹತ್ ಬಂಡೆಗಳ ತೆರವುಗೊಳಿಸಿ, ಇಲ್ಲೊಂದು ಸುಸಜ್ಜಿತ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಂಘದ ಹಿಂದಿನ ಹಾಗೂ ಈಗಿನ ಪದಾಧಿಕಾರಿಗಳು ಮತ್ತು ಸದಸ್ಯರ ಬಲವಾದ ಆಕಾಂಕ್ಷೆಯಾಗಿದ್ದು, ಪೂಕರವೆಂಬಂತೆ ಈಗಾಗಲೇ ಸಾಕಷ್ಟು ಕೆಲಸಗಳು ನಡೆದಿವೆ. ಸರಿ ಸುಮಾರು ಎರಡು ಕೋಟಿ ರೂ ಅಂದಾಜು ವೆಚ್ಚದ ಎರಡಂತಸ್ತಿನ ಕಟ್ಟಡ ನಿರ್ಮಾಣ ಯೋಜನೆ ಇದಾಗಿದೆ.

ಸದ್ಯ ಇಲ್ಲಿ ತಳಮಹಡಿ ಕೆಲಸ ನಡೆಯುತ್ತಿದ್ದು, ಕಾಮಗಾರಿಗೆ ಆರ್ಥಿಕ ತೊಡಕುಂಟಾಗಿದೆ. ನಿರೀಕ್ಷೆಯಂತೆ ಎಲ್ಲವೂ ಕೈಗೂಡಿದರೆ, ಅಂದರೆ ಕಾಮಗಾರಿ ಪೂರ್ಣಗೊಂಡರೆ ಸಮುದಾಯ ಭವನದ ತಳಮಹಡಿ ಬಿಲ್ಲವರ ಸೇವೆಗೆ ಒದಗಿ ಬರಲಿದೆ. ಬಳಿಕ ಎರಡನೇ ಮಹಡಿ ಕಾಮಗಾರಿ ಮುಂದುವರಿಯಲಿದೆ. ಇಷ್ಟರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹದ ನೆರಳಲ್ಲೇ ಸಾಗಿದ ಸಂಘದ ಸಕಲ ಕೆಲಸಗಳಿಗೆ ಸಹೃದಯಿಗಳು, ಊರ-ಪರವೂರ ದಾನಿಗಳ ನೆರವು ಸಿಕ್ಕಿದೆ ಎಂಬುದು ಸಂತೋಷದ ಸಂಗತಿ. ಆದರೆ ಸರ್ಕಾರದ ಪ್ರತಿನಿಧಿಗಳಿಂದ ನಿರ್ದಿಷ್ಟ ಮೊತ್ತದ ಆಶ್ವಾಸನೆ ಸಿಕ್ಕಿದೆಯೇ ಹೊರತು ಅದು ಈವರೆಗೆ ಪೂರೈಕೆಯಾಗಿಲ್ಲ ಎಂಬುದು ಬೇಸರದ ಸಂಗತಿ.

``ಗುರುಪುರವೆಂಬ ಸಣ್ಣ ಊರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದೊಂದಿಗೆ ಸ್ಥಾಪನೆಯಾದ ನಮ್ಮ ಸಂಘವು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಕನಿಷ್ಠ ದರದಲ್ಲಿ ಕೈಗೆಟಕಬೇಕೆಂಬ ಸದುದ್ದೇಶದಿಂದ ನಿರ್ಮಿಸುತ್ತಿರುವ ನೂತನ ಸಮುದಾಯ ಭವನದ ನಿರ್ಮಾಣ ಕಾರ್ಯವು ನಿಧಾನಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ. ದಾನಿಗಳು ಮನಸ್ಸು ಮಾಡಿದರೆ ಈ ಕೆಲಸ ಶೀಘ್ರ ಕೈಗೂಡಲಿದೆ'' ಎಂದು ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಆಶಾವಾದ ವ್ಯಕ್ತಪಡಿಸಿದ್ದಾರೆ.

``ಕಳೆದ 60 ವರ್ಷಗಳಿಂದ ಯಾವುದೇ ಗೊಂದಲ, ಹಗರಣಗಳಿಲ್ಲದೆ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದೇವೆ. ಸಮುದಾಯ ಭವನಕ್ಕೆ ದಾನಿಗಳ ನೆರವಿನೊಂದಿಗೆ ಗರಿಷ್ಠ ಮಟ್ಟದಲ್ಲಿ ಸರ್ಕಾರದ ಅನುದಾನ ಪಡೆಯಲು ಪ್ರಯತ್ನಿಸಲಿದ್ದೇವೆ'' ಎಂದು ಸಂಘದ ಕೋಶಾಧಿಕಾರಿ ಶೀನ ಕೋಟ್ಯಾನ್ ಬೆಳ್ಳಿಬೆಟ್ಟು ಹೇಳಿದ್ದಾರೆ.

``ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದ ಅನುದಾನ ಲಭಿಸದೆ, ಸಮುದಾಯ ಭವನ ನಿರ್ಮಾಣ ಕಾಮಗಾರಿ ಕುಂಠಿತವಾಗಿದೆ. ಸಮಾಜ ಬಾಂಧವರು ಕೈಜೋಡಿಸಿದರೆ ಸಂಘಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ'' ಎಂದು ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ಬರಿಪಟ್ಲ ತಿಳಿಸಿದ್ದಾರೆ.

ಸರ್ಕಾರದ ನೆರವಿನ ನಿರೀಕ್ಷೆ ಇಟ್ಟುಕೊಂಡಿರುವ ಸಂಘದ `ಸಮುದಾಯ ಭವನ' ಕನಸು ನನಸಾಗುವಲ್ಲಿ ಸಮಸ್ತ ಬಿಲ್ಲವ ಬಂಧುಗಳು, ಬಿಲ್ಲವ ಸಂಘ-ಸಂಸ್ಥೆಗಳು, ಅಸೋಸಿಯೇಶನ್, ಮಂಡಲಗಳು ಹಾಗೂ ಸಹೃದಯಿಗಳು ಭುಜಕ್ಕೆ ಭುಜ ಕೊಡುವ ಅವಶ್ಯಕತೆ ಇದೆ. ಹೀಗಾದರೆ ಮಾತ್ರ ಸಂಘವು ಹೊಸ ವರ್ಷದ ಆರಂಭದಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡಲು ಬಯಸಿರುವ ಸಮುದಾಯ ಭವನ ಸಾಕಾರಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ನಿಮ್ಮ ನೆರವು, ಒಂದು ಸಮಾಜದ ಬಡ ಕುಟುಂಬಗಳ ಕಷ್ಟಗಳಿಗೆ ವಿನಿಯೋಗವಾಗಲಿದೆ ಎಂಬ ಭರವಸೆಯೊಂದಿಗೆ, ಸಂಘದ ಕನಸು ನನಸಾಗಿಬೇಕೆಂಬ ತಮ್ಮೆಲ್ಲರ ಆಶೋತ್ತರಗಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪಾಕಟಾಕ್ಷವಿರಲಿ ಎಂದು ಪ್ರಾರ್ಥಿಸುತ್ತೇವೆ.

ಹೆಚ್ಚಿನ ಮಾಹಿತಿಗಾಗಿ 9900254062/9844684007(ಸಂಘದ ಅಧ್ಯಕ್ಷ ಮಹಾಬಲ ಅಮೀನ್/ಕೋಶಾಧಿಕಾರಿ ದೀಪಕ್ ಬಂಗೇರ) ಸಂಪರ್ಕಿಸಬಹುದು. ಸಂಘವು ಗುರುಪುರ ಸಿಂಡಿಕೇಟ್(ಕೆನರಾ) ಬ್ಯಾಂಕ್‍ನಲ್ಲಿ 01242200001734 ಸಂಖ್ಯೆಯ ಖಾತೆ ಹೊಂದಿದೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here