Sunday 16th, May 2021
canara news

ನಮ್ಮ ಕುಡ್ಲ ಟಾಕೀಸ್-ಒಂದು ವಿನೂತನ ಪ್ರಯತ್ನ

Published On : 17 Feb 2021   |  Reported By : Rons Bantwal


ತುಳು ಚಿತ್ರರಂಗದ ಪಾಲಿಗೆ ಹೊಸ ಆಶಾಕಿರಣ

ಮುಂಬಯಿ (ಆರ್ ಬಿಐ), ಫೆ.17: ಕೋವಿಡ್ ಎಂಬ ಹೊಸ ಸವಾಲು ನಮ್ಮ ಜೀವನ ವ್ಯವಸ್ಥೆಯನ್ನು ಬಹಳ ಕಾಡಿದೆ. ಅದರಿಂದ ಸಾಕಷ್ಟು ಬದಲಾವಣೆಗಳೂ ಆಗಿವೆ. ಜತೆಗೆ ಸಾಕಷ್ಟು ಹೊಸ ಪ್ರಯೋಗಗಳೂ ಆಗಿವೆ. ಈಗ ಅದರ ಸಾಲಿಗೆ ನಮ್ಮ ಕುಡ್ಲ ಟಿವಿ ಚಾನೆಲ್‍ನ ಹೊಸ ಪರಿಕಲ್ಪನೆಯಾಗಿರುವ ನಮ್ಮ ಕುಡ್ಲ ಟಾಕೀಸ್. ಕೋವಿಡ್‍ನಿಂದಾಗಿ ಸಿನಿಮಾ ರಂಗ ತುಂಬಾ ಸೊರಗಿದೆ. ಅದರಲ್ಲೂ ತುಳು ಸಿನಿಮಾ ರಂಗಕ್ಕೆ ಇದರ ಬಿಸಿ ಹೆಚ್ಚು ತಟ್ಟಿದೆ. ಈಗ ಚಿತ್ರಮಂದಿರ ಕೊರತೆ ಸಹಿತ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಂಡು ಕೋಸ್ಟಲ್‍ವುಡ್ ತೀವ್ರ ಸಂಕಷ್ಟದಲ್ಲಿದೆ. ಇದೇ ಕಾರಣದಿಂದ ತುಳು ಸಿನಿಮಾ ರಂಗಕ್ಕೆ ಸಹಾಯ ಮಾಡುವ ಒಂದು ವಿಶೇಷ ಪ್ರಯತ್ನವಾಗಿ ನಮ್ಮ ಕುಡ್ಲ ಟಾಕೀಸ್ ಆರಂಭವಾಗಲಿದೆ ಮಲ್ನಾಡ್ ಇನ್ಫೋಟೆಕ್ ಲಿಮಿಟೆಡ್‍ನ ಸಿಇಒ ಹರೀಶ್ ಬಿ.ಕರ್ಕೇರ ತಿಳಿಸಿದರು.

ಕಳೆದ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್‍ನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ, ನಮ್ಮ ಕುಡ್ಲ ಟಾಕೀಸ್ ಸಿಒಒ ಕದ್ರಿ ನವನೀತ ಶೆಟ್ಟಿ, ಗೌರವ ನಿರ್ದೇಶಕ ಅರ್ಜುನ್ ಕಾಪಿಕಾಡ್,ವಿ4 ಡಿಜಿಟಲ್ ಇನ್ಫೋಟೆಕ್‍ನ ಎಂಎಸ್‍ಒ ರಣದೀಪ್ ಕಾಂಚನ್, ನಮ್ಮ ಕುಡ್ಲ ಟಾಕೀಸ್‍ನ ಪಿಆರ್‍ಒ ಜಗನ್ನಾಥ ಶೆಟ್ಟಿ ಬಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಹರೀಶ್ ಕರ್ಕೇರ ಮಾತನಾಡಿದರು.

ಏನಿದರ ವಿಶೇಷತೆ?
ನಮ್ಮ ಕುಡ್ಲ ಟಾಕೀಸ್ ಒಂದು ವಿಶೇಷ ಪ್ರಯೋಗ. ಇದರಲ್ಲಿ ಹೊಸ ಸಿನಿಮಾಗಳನ್ನು ಪ್ರದರ್ಶಿಸುವುದು ಈಗಿನ ಚಿಂತನೆ. ಸೆನ್ಸಾರ್ ಆದ ತುಳು ಸಿನಿಮಾಗಳ ನಿರ್ಮಾಪಕರು ನಮ್ಮ ಕುಡ್ಲ ಟಾಕೀಸ್‍ನ ಪ್ರಮುಖರನ್ನು ಕಂಡು ಮಾತನಾಡಿ ಚಿತ್ರ ಪ್ರದರ್ಶನಕ್ಕೆ ಒಪ್ಪಿದರೆ ಮೊದಲು ನಮ್ಮ ಕುಡ್ಲ ಟಾಕೀಸ್‍ನ ತಂಡವೊಂದು ಸಿನಿಮಾವನ್ನು ವೀಕ್ಷಿಸಲಿದೆ. ತಂಡಕ್ಕೆ ಖುಷಿಯಾದರೆ ಮುಂದಿನ ಮಾತುಕತೆ. ಅದರ ಪ್ರಕಾರ ಒಂದು ತಿಂಗಳ ಕಾಲ ಈ ಸಿನಿಮಾವನ್ನು ಸಿನಿಮಾಮಂದಿರದಲ್ಲಿ ಬಿಡುಗಡೆ ಮಾಡುವಂತಿಲ್ಲ. ಪ್ರೀಮಿಯರ್ ಶೋಗೆ ಅವಕಾಶವಿದೆ. ಬಳಿಕ ಒಂದು ತಿಂಗಳ ಕಾಲ ಪ್ರತೀ ಭಾನುವಾರ ಮೂರು ಬಾರಿ ಈ ಸಿನಿಮಾವನ್ನು ನಮ್ಮ ಕುಡ್ಲ ಟಾಕೀಸ್ ಪ್ರದರ್ಶಿಸಲಿದೆ. ಇದಕ್ಕೆ ಪ್ರತಿಯಾಗಿ ಚಿತ್ರ ನಿರ್ಮಾಪಕರಿಗೆ ಯೋಗ್ಯ ಗೌರವಧನ ನೀಡಲಾಗುವುದು. ತದನಂತರ ನಿರ್ಮಾಪಕರು ಸಿನಿಮಾವನ್ನು ಟಾಕೀಸ್‍ಗಳಲ್ಲಿ ಬಿಡುಗಡೆ ಮಾಡಬಹುದು.
ಇದು ತುಳು ಸಿನಿಮಾ ನಿರ್ಮಾಪಕರಿಗೆ ಒಂದು ಉತ್ತೇಜನಕಾರಿ ಕ್ರಮವಾಗಲಿದೆ ಎಂದು ಭಾವಿಸಲಾಗಿದೆ. ಜತೆಗೆ ಪ್ರತಿ ಮನೆಯಲ್ಲೇ ಟೀವಿಯಲ್ಲೇ ಕುಟುಂಬ ಸಹಿತವಾಗಿ ಸಣ್ಣ ಮೊತ್ತಕ್ಕೆ ತುಳು ಸಿನಿಮಾ ವೀಕ್ಷಿಸಬಹುದು. ಅದಕ್ಕೆ ಪ್ರತಿಯಾಗಿ ಪ್ರತಿ ಮನೆಯಿಂದ ಕೇಬಲ್‍ಗೆ 120 ರೂ. ನೀಡಬೇಕಾಗಿದೆ. ಅಷ್ಟೆ. ಒಂದೊಮ್ಮೆ ಎಚ್‍ಡಿ ಚಾನೆಲ್ ಬಯಸಿದರೆ 160 ರೂ. (ಜಿಎಸ್‍ಟಿ ಸೇರಿ) ನೀಡಿದರೆ ಸಾಕಾಗುತ್ತದೆ.
ಕುಡ್ಲ ಟಾಕೀಸ್‍ನ ಪ್ರಕಾರ ಪ್ರದರ್ಶನಕ್ಕೆ ಆಯ್ಕೆಯಾಗುವ ಸಿನಿಮಾವನ್ನು ಕನಿಷ್ಠ 3ರಿಂದ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ. ಸಿನಿಮಾ ಉತ್ತಮವಾಗಿದ್ದರೆ ಆ ಬಳಿಕವೂ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಸ್ಪಂದನೆ ಉತ್ತಮವಾಗಿರಲಿದೆ.

ಹೊಸ ಪ್ರಯತ್ನ
ಇದೊಂದು ಹೊಸ ಪ್ರಯತ್ನ. ಇದು ಸಫಲವಾದರೆ ತುಳು ಚಿತ್ರರಂಗ ಮತ್ತು ಚಿತ್ರಪ್ರೇಮಿಗಳಿಗೆ ಒಂದು ಸುವರ್ಣಾವಕಾಶವಾಗಲಿದೆ. ಈಗಾಗಲೇ ಕರಾವಳಿಯಲ್ಲಿ ಮನೆಮಾತಾಗಿರುವ ನಮ್ಮ ಕುಡ್ಲ ಚಾನೆಲ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಪ್ರಮುಖ ಕಾರ್ಯಕ್ರಮಗಳನ್ನೂ ನೇರ ಪ್ರಸಾರ ಮಾಡಿ ಜನಪ್ರಿಯತೆ ಮತ್ತು ಜನಮೆಚ್ಚುಗೆ ಗಳಿಸಿಕೊಂಡಿದೆ. ಈಗ ತುಳು ಸಿನಿಮಾ ರಂಗಕ್ಕೂ ಪರೋಕ್ಷವಾಗಿ ಸಹಾಯಹಸ್ತ ಚಾಚುವ ಮೂಲಕ ತುಳು ಮಾತೆಯ ಸೇವೆಗೆ ಮುಂದಾಗಿದೆ.

ಲಾಂಛನ ಬಿಡುಗಡೆ
ತಿಂಗಳಿಗೊಂದು ಹೊಸ ತುಳು ಚಲನ ಚಿತ್ರವನ್ನು ನಮ್ಮ ಕುಡ್ಲ ಟಾಕೀಸ್ ಮೂಲಕ ಕೇಬಲ್ ಟಿವಿಯಲ್ಲಿ ಮಾರ್ಚ್ ಮೊದಲ ಭಾನುವಾರದಿಂದ ಬಿಡುಗಡೆ ಮಾಡಲಾಗುವುದು. ಅದರ ಲಾಂಛನ ಬಿಡುಗಡೆ ನಡೆಯಲಿದೆ. ಸಮಾರಂಭದಲ್ಲಿ ತುಳು ಚಲನ ಚಿತ್ರ ರಂಗದ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಹಿತೈಷಿಗಳು ಭಾಗವಹಿಸಲಿದ್ದಾರೆ.

ತಿಂಗಳಿಗೊಂದು ಸಿನಿಮಾ
ತುಳು ಸಿನಿಮಾರಂಗವು ಸೀಮಿತ ಮಾರುಕಟ್ಟೆ ಹೊಂದಿರುವ ಕಾರಣ ಅಲ್ಪಾವಧಿಯ ಅಂತರದಲ್ಲಿ ತುಳು ಸಿನಿಮಾಗಳು ಬಿಡುಗಡೆಗೊಳ್ಳುವುದರಿಂದ ಚಿತ್ರ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ಆದ ಕಾರಣ ಕನಿಷ್ಟ ಒಂದು ತಿಂಗಳ ಅಂತರದಲ್ಲಿ ಹೊಸ ಚಿತ್ರ ಬಿಡುಗಡೆ ಮಾಡುವ ಯೋಜನೆ ನಮ್ಮ ಕುಡ್ಲ ಟಾಕೀಸ್ ಹಾಕಿಕೊಂಡಿದೆ.

ತುಳು ಚಿತ್ರರಂಗ ಸುವರ್ಣ ಸಂಭ್ರಮಾಚರಣೆ
50 ವರ್ಷಗಳ ಹಿಂದೆ 1971ರಲ್ಲಿ ಫೆಬ್ರವರಿ 19ರಂದು ತುಳುವಿನಲ್ಲಿ ?ಎನ್ನ ತಂಗಡಿ ಕಪ್ಪು ಬಿಳುಪು ಸಿನಿಮಾ ತುಳುವಿನಲ್ಲಿ ತೆರೆಕಂಡ ಮೊದಲ ಸಿನಿಮಾ. ಈ ವರೆಗೆ ಸುಮಾರು 114 ಸಿನಿಮಾ ತುಳುವಿನಲ್ಲಿ ತೆರೆಕಂಡಿದೆ. 2021ರ ಫೆ 19ಕ್ಕೆ ತುಳು ಚಿತ್ರ ರಂಗ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ ನಮ್ಮ ಕುಡ್ಲ ಟಾಕೀಸ್ ಅಸ್ಥಿತ್ವಕ್ಕೆ ಬರುತ್ತಿದ್ದು, ಸಿನಿಮಾ ನಿರ್ಮಾಪಕರಿಗೆ ಇದರಿಂದ ಪ್ರಯೋಜನ ಆಗಲಿದೆ.

ನಮ್ಮ ಕುಡ್ಲ ಟಾಕಿಸ್
ಪ್ರಪ್ರಥಮ ತುಳು ವಾರ್ತಾವಾಹಿನಿ ನಮ್ಮ ಕುಡ್ಲವು ಕಳೆದ 22 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದೆ. ನಾಡು ನುಡಿ, ಸಂಸ್ಕೃತಿಯ ಸೇವೆ ಮಾಡುತ್ತಿರುವ ನಡಾವಳಿ, ಮಸ್ತಕಾಭಿಷೇಕ, ಕಂಬಳ, ಸಮ್ಮೇಳನ, ನಾಗಮಂಡಲ, ಬ್ರಹ್ಮಕಲಶ, ಕ್ರಿಡೋತ್ಸವ ಮೊದಲಾದ ಕಾರ್ಯಕ್ರಮಗಳ ನೇರ ಪ್ರಸಾರ ಮಾಡುವ ಮಾಧ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಕರ್ಕೇರ ಸಹೋದರರ ನಮ್ಮ ಕುಡ್ಲ ಬಳಗದ ಹೊಸ ವಿಭಾಗ ನಮ್ಮ ಕುಡ್ಲ ಟಾಕೀಸ್. ನಮ್ಮ ಕುಡ್ಲ ಟಾಕೀಸು ಒಂದು ವಿನೂತನ ಪ್ರಯತ್ನ. ತುಳು ಚಿತ್ರದ ಪಾಲಿಗೆ ಹೊಸ ಆಶಾ ಕಿರಣ, ಇದರಿಂದ ಹೊಸ ತುಳು ಸಿನಿಮಾಗಳನ್ನು ಮನೆಯ ಟಿವಿಯಲ್ಲೇ ನೋಡುವ ಅವಕಾಶ. ತಿಂಗಳಿಗೊಂದು ತುಳು ಸಿನಿಮಾ.

 
More News

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Comment Here