Sunday 13th, June 2021
canara news

ಆಯ್ಕೆ... (ಬರಹ: ಹರಿಣಿ ನಿಲೇಶ್ ಪೂಜಾರಿ, ಪಲಿಮಾರ್)

Published On : 29 May 2021   |  Reported By : Rons Bantwal


ಜೀವನದಲ್ಲಿ ಬರೋ ಅತ್ಯಂತ ಸುಂದರವಾದ ಪದ ಹಾಗೆ ಅತ್ಯಂತ ಕೆಟ್ಟ ಪದ ಅಂದ್ರೆ ಅದು ಆಯ್ಕೆ. ಹೇಗೆ ಅಂತ ಯೋಚನೆ ಮಾಡ್ತಿದೀರಾ? ನಮ್ಮ ಆಯ್ಕೆಗಳು ಸುಂದರವಾಗಿದ್ದಷ್ಟು ಜೀವನ ಸುಂದರವಾಗಿರುತ್ತೆ. ಮನಸು ಯಾವಾಗ ಕೆಟ್ಟ ಆಯ್ಕೆಗಳ ಕಡೆಗೆ ವಾಲುತ್ತೋ ಜೀವನ ಅಷ್ಟೇ ಕೆಟ್ಟದಾಗುತ್ತ ಹೋಗುತ್ತೆ. ಹಾಗಾದರೆ ಸಕಾರಾತ್ಮಕ, ಸುಂದರವಾದ ಆಯ್ಕೆಗಳನ್ನು ಮಾಡಿಕೊಳ್ಳುವುದು ಹೇಗೆ ಅಂತ ಯೋಚನೆ ಬರುವುದು ಸಹಜ. ಯಾವುದೇ ಪ್ರಮುಖ ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕಾದರೆ ಮನಸಿನಲ್ಲಿ ನೂರಾರು ಗೊಂದಲಗಳು ಉಂಟಾಗುವುದು ಸಹಜ. ಆದ್ರೆ ಆ ಗೊಂದಲಗಳನ್ನೆಲ್ಲಾ ಬದಿಗಿಟ್ಟು ಏಕಮನಸಿನಿಂದ, ಒಳಮನಸಿನ ಚಂಚಲತೆ, ದುಗುಡಗಳನೆಲ್ಲಾ ಬದಿಗಿಟ್ಟು ನಿರ್ದಾರಗಳನ್ನೂ ಕೈಗೊಂಡು, ಸೂಕ್ತ ಆಯ್ಕೆ ಮಾಡಿಕೊಂಡರೆ ಮಾತ್ರ ಜೀವನ ಸಕರಾತ್ಮಕವಾಗಿ ಸಾಗಲು ಸಾಧ್ಯ...

ಒಂದು ದಿನ ಬೆಳಿಗ್ಗೆ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಹೊರಟಿದ್ವಿ. ಜಯನಗರದ ಬಳಿ ಇರುವ ಜಯದೇವ ಸಿಗ್ನಲ್ನಲ್ಲಿ ಸ್ವಲ್ಪ ಹೊತ್ತು ನಿಂತ ಸಂದರ್ಭದಲ್ಲಿ ಒಬ್ಬ ಮದ್ಯ ವಯಸ್ಕ ಕುಡಿದ ಮತ್ತಿನಲ್ಲಿ ತೂರಡುತ್ತ ಪುಟ್ಟ ಮಗುವನ್ನು ಹಿಡಿದುಕೊಂಡು ಭಿಕ್ಷೆ ಬೇಡುತ್ತ ಬಂದ. ದುಡಿದು ತಿನ್ನೋ ಸಾಮರ್ಥ್ಯ ಇರೋರು ಕೂಡ ಸೋಮಾರಿಗಳಾಗಿ ಭಿಕ್ಷೆ ಬೇಡುವುದು ಎಲ್ಲಾ ಕಡೆನೂ ಸಾಮಾನ್ಯವಾಗಿಬಿಟ್ಟಿದೆ. ಇಂತವರಿಗೆ ನಾವು ಯಾವತ್ತು ಭಿಕ್ಷೆ ಕೊಡೋದಿಲ್ಲ.ಆದರೆ ಅಂದ್ಯಾಕೋ ಆ ಮಗುವನ್ನು ನೋಡಿ ನನ್ನ ಕರುಳು ಹಿಂಡಿದಂತಾಯಿತು.ಪರ್ಸ್ನಲ್ಲಿದ್ದ ಸ್ವಲ್ಪ ಹಣವನ್ನು ತೆಗೆದು ಅವನ ಕೈಯಲ್ಲಿಟ್ಟು ಮಗುವಿಗೆ ಏನಾದ್ರು ಕೊಡಿಸಪ್ಪ ಎಂದೆ. ಆದರೂ ಯಾಕೋ ಮನಸು ತಡೆಯಲಿಲ್ಲ ನೋಡೋದಕ್ಕೆ ದಷ್ಟಪುಸ್ಟವಾಗಿ ಇದ್ದಾನಲ್ಲ ಎಂದು ಕೊಂಡವಳೆ ಏನಪ್ಪಾ ನೋಡೋದಕ್ಕೆ ಇಷ್ಟೊಂದು ಗಟ್ಟಿಮುಟ್ಟಾಗಿದ್ದಿಯಾ ಈ ರೀತಿ ಮಗುವನ್ನು ಹಿಡಿದು ಕೊಂಡು ಭಿಕ್ಷೆ ಬೇಡೋ ಬದಲು ಯಾವದಾದ್ರು ಕೆಲಸಕ್ಕೆ ಸೇರಿಕೊಂಡು ನೆಮ್ಮದಿಯ ಜೀವನ ಮಾಡಬಹುದಲ್ವಾ ಎಂದೆ.

ಆತನೀಗೆ ಏನು ಅನ್ನಿಸುತೋ ಗೊತ್ತಿಲ್ಲ ಸಿಟ್ಟಿನಿಂದ ನನ್ನನ್ನು ದಿಟ್ಟಿಸಿ ನೋಡಿದವನೆ ನಾನು ಕೊಟ್ಟ ಹಣವನ್ನು ನನ್ನ ಕೈಯಲಿಟ್ಟು ಸರಸರನೆ ನಡೆದು ಹೋದ. ಆಗ ಪಕ್ಕದಲ್ಲಿದ್ದ ನನ್ನ ಯಜಮಾನ್ರು ಅವನಿಗೆ ಭಿಕ್ಷೆ ಕೊಡ್ಬೇಕೋ ಬೇಡವೋ ಅನ್ನುವುದು ನಿನ್ನ ಆಯ್ಕೆ, ಆದ್ರೆ ಭಿಕ್ಷೆ ಬೇಡುವುದು ಅವನ ಆಯ್ಕೆ ಅಂದ್ರು. ಹಾಗಾದರೆ ಬದುಕನ್ನು ಹೇಗೆ ಬದುಕಬೇಕು ಎನ್ನುವುದು ನಮ್ಮ ಆಯ್ಕೆಯೇ..? ಹೌದು ಆದರೆ ಕೆಲವರು ಅನಿವಾರ್ಯತೆಯ ಬದುಕನ್ನು ಬದುಕುತಿದ್ದೇವೆ ಎಂದು ದುಃಖ ಪಡುವವರಿದ್ದಾರೆ. ಆದರೆ ಇನ್ನು ಕೆಲವರು ಆ ಅನಿವಾರ್ಯತೆಯಲ್ಲಿಯೂ ಕೂಡ ತಮ್ಮ ಇತಿಮಿತಿಗಳನ್ನ ಅರ್ಥಮಾಡಿಕೊಂಡು ಸಂತೋಷವಾದ ಬದುಕನ್ನು ನಡೆಸುವವರು ಇದ್ದಾರೆ. ಹೇಗೆ ಬೆಳಕಿರುವ ಕಡೆ ಕತ್ತಲಿರುವುದೋ ಹಾಗೆಯೇ ಉತ್ತಮ ದಾರಿಇರೋಕಡೆ ಮನಸ್ಸನ್ನು ಕೆಡಿಸುವ ದುಷ್ಟ ಆಲೋಚನೆಗಳನ್ನೂ ಪ್ರೇರೇಪಿಸುವ ದುಷ್ಟದಾರಿಗಳು ಅಡ್ಡಲಾಗಿ ಹಾರಿಹೋಗುವುದು ಸಹಜ.ಗುರಿಯೆಡೆಗೆ ನಡೆಯುವಾತನಿಗೆ ಈ ಎರಡು ದಾರಿಗಳ ಆಯ್ಕೆ ಇರುತ್ತದೆ.ಯಾವ ದಾರಿಯಲ್ಲಿ ನಡೆಯಬೇಕೆನ್ನುದನ್ನು ತನ್ನ ಆತ್ಮಜ್ಞಾನಕನುಗುನವಾಗಿ ತಾನೇ ಆಯ್ಕೆ ಮಾಡಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ಕನಸುಗಳಿರುತ್ತದೆ. ತನ್ನ ಬದುಕನ್ನು ಹೀಗೆ ನಡೆಸಬೇಕು ಹಾಗೆ ನಡೆಸಬೇಕು ಎಂದು ನೂರಾರು ಕನಸುಗಳನ್ನ ಕಾಣುವವರಿದ್ದಾರೆ. ಆದರೆ ವಾಸ್ತವತೆ ಬೇರೆಯೇ ಆಗಿರುತ್ತದೆ. ಕಂಡ ಕನಸುಗಳೆಲ್ಲ ನನಸಾಗಲು ಸಾಧ್ಯವಿಲ್ಲ, ಅಸಾಧ್ಯ ಕೂಡ. ಆದರೆ ವಾಸ್ತವತೆಯಲ್ಲಿ ಪ್ರತಿಯೊಬ್ಬರಿಗೂ ಒಂದು ಹಂತ ದಲ್ಲಿ ಬದುಕಿನ ಆಯ್ಕೆ ಸಿಕ್ಕೇಸಿಗುತ್ತೆ. ಆಯ್ಕೆಯಂತಲೇ ಬದುಕುತ್ತಲೇ ಇರುತ್ತಾರೆ. ಆದರೆ ತಾವು ಕಂಡಿದ್ದ ಅಸಾಧ್ಯ
ಕನಸನ್ನು ನೆನೆಸಿಕೊಂಡು ಅವರಿವರೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ಕೊರಗುತ್ತಲೂ ಇರುತ್ತಾರೆ.

ನಾವೇ ಆಯ್ಕೆಮಾಡಿಕೊಂಡ ಬದುಕು ಕೊರಗದೆ ಮರುಗದೆ ಜೀವನ ನಡೆಸಿದರೆ ಸಂತೋಷದ ಜೀವನ ನಮ್ಮದಾಗುವುದು ಖಂಡಿತ. ಹಾಗಾಗಿ ನಾವು ಮಾಡಿಕೊಂಡ ನಮ್ಮ ಜೀವನದ ಆಯ್ಕೆಯನ್ನು ಮತ್ತಷ್ಟು ಸುಂದರಗೊಳಿಸುವುದು ನಮ್ಮದೇ ಆಯ್ಕೆಯಲ್ಲವೆ...
More News

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Comment Here