Sunday 13th, June 2021
canara news

ಕೊರೋನಾ ಕಾಲದಲ್ಲಿ ಪರಿಸರವಾಸಿಗಳಿಗೆ ಧೈರ್ಯ ತುಂಬುವ ರಘು ಸಾಲ್ಯಾನ್

Published On : 29 May 2021   |  Reported By : Rons Bantwal


ವೈಯಕ್ತಿಕ ನೆಲೆಯ ಸಮಾಜಸೇವೆ ಎಲ್ಲೆಡೆ ಪ್ರಸಂಶನೀಯ

ಮುಂಬಯಿ (ಆರ್‍ಬಿಐ), ಮೇ.26: ಧೈರ್ಯವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸ ಬಹುದೆಂಬ ಮಾತೊಂದಿದೆ. ಪ್ರಸಕ್ತ ಕೊರೋನಾ ಸಂದಿಗ್ಧ ಕಾಲಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತಿದೆ. ಕೋವಿಡ್ ಸೋಂಕಿತರು ಧೈರ್ಯಗೆಡಬಾರದು. ಧೈರ್ಯದಿಂದ ಇದ್ದರೆ ಅರ್ಧ ಕೊರೋನಾ ಗೆದ್ದಂತೆ. ಸೋಂಕಿತರಿಗೆ ಧೈರ್ಯ ತುಂಬುವ ಕೆಲಸವಾಗಬೇಕಿದೆ. ವಾಮಂಜೂರು ತಿರುವೈಲು ಗ್ರಾಮದ ಉದ್ಯಮಿ, ತಿರುವೈಲು ವಾರ್ಡ್‍ನ ಕಾಪೆರ್Çರೇಟರ್ ಹೇಮಲತಾ ಸಾಲ್ಯಾನ ಅವರ ಪತಿ ರಘು ಸಾಲ್ಯಾನ್ ಕೊರೋನಾ ಕಾಲದಲ್ಲಿ ಪರಿಸರವಾಸಿಗಳಿಗೆ, ಮುಖ್ಯವಾಗಿ ಕೋವಿಡ್ ಸೋಂಕಿತರು ಮತ್ತು ಅವರ ಕುಟುಂಬಿಕರಲ್ಲಿ ಧೈರ್ಯ ತುಂಬಿ, ವೈಯಕ್ತಿಕ ನೆಲೆಯಲ್ಲಿ ನೆರವಾಗುತ್ತಿರುವ ಸಮಾಜಸೇವೆ ಎಲ್ಲೆಡೆ ಪ್ರಸಂಶೆಗೆ ಪಾತ್ರವಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಾಪಿಸಿದ ಕೋವಿಡ್ ಹೆಲ್ತ್‍ಕೇರ್ ವಾರ್ ರೂಂನಲ್ಲಿ ಶವಸಂಸ್ಕಾರಗಳ ಅಂತ್ಯಕ್ರಿಯೆಯ ಉಸ್ತುವಾರಿ ಹಾಗೂ ಶಾಸಕ ಡಾ| ಭರತ್ ಶೆಟ್ಟಿ ಅವರು ತೆರೆದಿರುವ `ಸ್ಪಂದನ ಕೇಂದ್ರ'ದಲ್ಲಿ ಕೋವಿಡ್ ಸೋಂಕಿತರ ಸಹಿತ ಇತರ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಕಾರ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರತರಾಗಿರುವ ರಘು ಸಾಲ್ಯಾನ್, ಕೆಲವು ಸಮಯದ ಹಿಂದೆ ವಾಮಂಜೂರಿನ ಜೈಶಂಕರ್ ಮಿತ್ರ ಮಂಡಳಿಗೆ ತಾನೇ ಕೊಡುಗೆಯಾಗಿ ನೀಡಿರುವ ಆಂಬುಲೆನ್ಸ್‍ನಲ್ಲಿ ಡ್ರೈವರಾಗಿ ದಿನದ 24 ತಾಸು ದುಡಿಯುತ್ತಿದ್ದಾರೆ. ನೀರುಮಾರ್ಗ, ವಾಮಂಜೂರು, ತಿರುವೈಲು, ಪಚ್ಚನಾಡಿ, ಬೊಂಡಂತಿಲ ಹೀಗೆ ಗ್ರಾಮೀಣ ಭಾಗದ ಎಲ್ಲಿಂದಲಾದರೂ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಈ ಆಂಬುಲೆನ್ಸ್ ಸದಾ ಸಿದ್ಧವಿದ್ದು, ಎಲ್ಲ ಸಂದರ್ಭಗಳಲ್ಲೂ ಸಾಲ್ಯಾನ್ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಗೆಳೆಯರೊಂದಿಗೆ ಸೇರಿಕೊಂಡು ಖುದ್ದಾಗಿ ಪಿಪಿ ಕಿಟ್ ಧರಿಸಿ, ಶವಗಳ ಅಂತ್ಯಕ್ರಿಯೆ ನಡೆಸುತ್ತಾರೆ. ಇವರು ಎಂದೂ ಪ್ರಚಾರಕ್ಕೆ ಮೈಮರೆತು, ಸಮಾಜಸೇವೆ ಮಾಡಿಲ್ಲ ಎಂಬುದು ಹೆಚ್ಚುಗಾರಿಕೆ.

ಒಂದೂವರೆ ತಿಂಗಳಲ್ಲಿ 25 ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರು ಮಂದಿಯ ಶವ ಸಂಸ್ಕಾರ ನಡೆಸಿದ್ದಾರೆ. ಅಗತ್ಯವಿದ್ದವರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ನೆರವು, ವೈದ್ಯಕೀಯ ಮತ್ತು ಔಷಧಿ, ಜೀವನಾವಶ್ಯಕ ಸೊತ್ತು ಒದಗಿಸಿದ್ದಾರೆ. ಕೋವಿಡ್ ಸೋಂಕಿತರು, ಪ್ರಾಥಮಿಕ ಮತ್ತು ದ್ವಿತೀಯ ಸೋಂಕಿತರ ಮನೆಗಳಿಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸುವುದು, ಹೋಂ ಐಸೋಲೇಶನ್ ಮಂದಿಗೆ ದಿನಸಿ, ಔಷಧಿ ಒದಗಿಸಿ ಅವರಲ್ಲಿ ಧೈರ್ಯ ತುಂಬುವ ಸಾಲ್ಯಾನ್ ಮತ್ತವರ ಪತ್ನಿ ಹೇಮಲತಾರ ಮಾನವೀಯ ದೃಷ್ಟಿಕೋನದ ಸಮಾಜಸೇವೆ ಕೊರೋನಾ ಗೆದ್ದವರಿಂದ ಪ್ರಸಂಸೆಗೊಳಗಾಗಿದೆ.

ಕೊರೋನಾ ಗೆದ್ದ ಕುಟುಂಬ:
ತಿರುವೈಲು ಗ್ರಾಮದ ಕೊಡಂಗೆಯ ಲೋಕಯ್ಯ ಮತ್ತವರ ಪತ್ನಿ ಪುಷ್ಪಲತಾ, ಮಕ್ಕಳಾದ ಮಧುರಾ, ಶಶಾಂತ್ ವಾರದ ಹಿಂದೆ ಕೋವಿಡ್ ಸೋಂಕಿಗೊಳಗಾಗಿದ್ದು, ರಘು ಸಾಲ್ಯಾನ್‍ರ ಮಾನವೀಯ ನೆರವಿನಿಂದ ಈ ಕುಟುಂಬವಿಂದು ಕೊರೋನಾ ಮುಕ್ತವಾಗಿ ನಿಟ್ಟುಸಿರು ಬಿಡುವಂತಾಗಿದೆ.

``ನನ್ನ ಸಹಿತ ಎಲ್ಲ ನಾಲ್ವರಿಗೆ ಕೋವಿಡ್ ಪಾಸಿಟಿವ್ ಎಂದು ಗೊತ್ತಾದಾಗ ಆಕಾಶವೇ ಮೈಮೇಲೆ ಬಿದ್ದಂತಾಯಿತು. ಇದಕ್ಕಿಂತ ನಾಲ್ಕು ದಿನಗಳ ಹಿಂದೆಯಷ್ಟೇ ನನ್ನ ಹೊಸ ಮನೆಯ `ಗೃಹ ಪ್ರವೇಶ' ಆಗಿತ್ತು. ಇಂತಹ ಸಂದರ್ಭದಲ್ಲಿ ಮನೆಯವರೆಲ್ಲ ಆಸ್ಪತ್ರೆ ಬೆಡ್‍ನಲ್ಲಿ ಮಲಗಿದರೆ ದೇವರೇ ಗತಿ ಎಂಬಂತಾಗಿ ಭೀತಿ ಉಂಟಾಯಿತು. ಆಗ ಆಪತ್ಬಾಂಧವರಂತೆ ಮನೆಗೆ ಬಂದ ರಘು ಸಾಲ್ಯಾನ್ ಧೈರ್ಯದ ಮಾತು ಹೇಳಿ, ವೈದ್ಯರ ಸಲಹೆಯಂತೆ ಮನೆಯಲ್ಲೇ ಚಿಕಿತ್ಸೆ ಮುಂದುವರಿಸುವ ಅವಕಾಶ ನೀಡಿದರು. ಅಲ್ಲಿಂದ ಮುಂದೆ 15 ದಿನ ಧ್ಯೆರ್ಯ ಮಾಡಿ, ಎಲ್ಲರೂ ಮನೆಯಲ್ಲೇ ಇದ್ದು, ಈಗ ಕೊರೋನಾ ಮುಕ್ತರಾಗಿದ್ದೇವೆ. ನಾವು ಸೋಂಕಿತರಾಗಿರುವ ವಿಷಯ ಈಗ ಊರಿಗೆ ಗೊತ್ತಾಗಿದೆ. ಅದಕ್ಕಾಗಿ ನಮಗೆ ಬೇಸರವಿಲ್ಲ. ಆದರೆ ಕೊರೋನಾ ಸೋಂಕಿದಾಗ ಧೃತಿಗೆಡದೆ, ಧೈರ್ಯವಹಿಸಿ ಜೀವನ ನಡೆಸಿದಲ್ಲಿ ಖಂಡಿತವಾಗಿಯೂ ಈ ರೋಗ ಗೆಲ್ಲುವುದು ಕಷ್ಟವೇನಲ್ಲ. ಕೊರೋನಾದ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸಬೇಡಿ'' ಎಂದು ಪತ್ರಕರ್ತ ಧನಂಜಯ ಗುರುಪುರ ಅವರಲ್ಲಿ ಲೋಕಯ್ಯ ಹೇಳಿದರು.

 
More News

ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿ
ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿ
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‍ಎಸಿಸಿ ಪದವಿ ಪ್ರದಾನ
ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‍ಎಸಿಸಿ ಪದವಿ ಪ್ರದಾನ

Comment Here